ಹುಬ್ಬಳ್ಳಿ: ಮೈಕ್ರೋಫೈನಾನ್ಸ್‌ಗಳ ಅಬ್ಬರಕ್ಕೆ ಲಗಾಮು ಹಾಕಲು ಸರ್ಕಾರ ಮಸೂದೆಯೊಂದನ್ನು ರೂಪಿಸಿದೆ. ಮುಖ್ಯಮಂತ್ರಿಗಳ ಪರಿಶೀಲನೆಗೆ ಕಳಿಸಲಾಗಿದ್ದು, ಒಪ್ಪಿಗೆ ಸಿಕ್ಕ ತಕ್ಷಣ ರಾಜ್ಯಪಾಲರಿಗೆ ಕಳಿಸಿ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಲಾಗುವುದು. ಮೈಕ್ರೋಫೈನಾನ್ಸ್‌ನಿಂದ ಸಾಲ ಪಡೆದವರು ಭಯ ಪಡಬೇಕಾಗಿಲ್ಲ. ಧೈರ್ಯವಾಗಿರಬೇಕು ಎಂದು ರಾಜ್ಯ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ ಪಾಟೀಲ ಹೇಳಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೈಕ್ರೋಫೈನಾನ್ಸ್‌ಗೆ ಅಂಕುಶ ಹಾಕ್ತೇವೆ. ಒಂಬುಡ್ಸ್ಮನ್ ಇದೆ. ಪೊಲೀಸರಿಗೂ ಹೆಚ್ಚಿನ ಅಧಿಕಾರವನ್ನು ಉದ್ದೇಶಿತ ಮಸೂದೆಯಲ್ಲಿ ನೀಡಲಾಗಿದೆ. ಮಸೂದೆ ಪೂರ್ಣ ಸಿದ್ಧವಾಗಿದೆ. ಮಸೂದೆ ಜಾರಿಗೆ ಸಂಬಂಧಿಸಿದಂತೆ ನಿರ್ಧಾರ ಕೈಗೊಳ್ಳುವ ಪರಮಾಧಿಕಾರವನ್ನು ಸಚಿವ ಸಂಪುಟ ಮುಖ್ಯಮಂತ್ರಿಗಳಿಗೆ ನೀಡಿದೆ. ಅವರು ಅಂತಿಮ ನಿರ್ಣಯ ನೀಡಿದ ಬಳಿಕ ಸುಗ್ರಿವಾಜ್ಞೆ ಮೂಲಕ ಜಾರಿಗೊಳಿಸುತ್ತೇವೆ ಎಂದು ಹೇಳಿದರು.