ವಿಜಯೇಂದ್ರಗೆ ದುಡ್ಡಿನ ಮದ

0
23

ಬೆಂಗಳೂರು: ಬಿಜೆಪಿ ಅಧ್ಯಕ್ಷ ವಿಜಯೇಂದ್ರಗೆ ದುಡ್ಡಿನ ದುರಹಂಕಾರವಿದೆ. ದುಡ್ಡು ಮಾತಾಡಿಸ್ತಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿಂದು ಮಾತನಾಡಿದ ಅವರು, ಸರ್ವಾಧಿಕಾರ ಪತನ ಆಗಲೇಬೇಕು. ಬಹಳ ದಿವಸ ಅನ್ಯಾಯ, ಸರ್ವಾಧಿಕಾರಿ ಮನಸ್ಥಿತಿ ಯಾವ ನಾಯಕನಲ್ಲಿದೆಯೋ ಅವರ ಅಂತ್ಯ ಬೇಗ ಆಗುತ್ತದೆ. ಈಗ ಆ ಕಾಲ ಬಂದಿದೆ ಎಂದು ಕಿಡಿಕಾರಿದರು. ಮುಡಾ ಪ್ರಕರಣದಲ್ಲಿ ಮೈಸೂರಿಗೆ ಪಾದಯಾತ್ರೆ ತಲುಪುದರೊಳಗೆ ರಾಜೀನಾಮೆ ಕೊಡಬೇಕು ಅಂತ ವಿಜಯೇಂದ್ರ ಹೇಳಿದ್ದರು. ಆದರೆ, ವಿಜಯೇಂದ್ರ ಮೇಲಿರುವ ಆರೋಪ ಹೊರ ತೆಗೆದುಬಿಟ್ಟರೆ ಅವರ ಕಥೆ ಮುಗಿದೇ ಹೋಗುತ್ತದೆ. ಅದ್ಯಾಕೆ ಸಿದ್ದರಾಮಯ್ಯನವರು ಸುಮ್ಮನಿದ್ದಾರೋ. ಇಲ್ಲ, ಸಿದ್ದರಾಮಯ್ಯರದ್ದು ಏನಾದ್ರೂ ವಿಜಯೇಂದ್ರ ಹತ್ರ ಇದೆಯೋ ಗೊತ್ತಿಲ್ಲ. ಅದಕ್ಕೆ ಹೊಂದಾಣಿಕೆ ಮಾಡಿಕೊಂಡಂತೆ ಕಾಣುತ್ತಿದೆ ಎಂದು ಆರೋಪಿಸಿದರು. ವಿಜಯೇಂದ್ರ ಅವರ ನೈಜ ಬಣ್ಣ ಬಯಲಾಗುತ್ತಿದೆ, ವರಿಷ್ಠರಲ್ಲಿ ನಾನು ಒಂದು ಮನವಿ ಮಾಡುತ್ತೇನೆ. ಸುಮ್ಮನೆ ಚುನಾವಣೆ ಸರ್ಕಸ್ ಮಾಡುವ ಬದಲು ನೇರವಾಗಿ ಅಧ್ಯಕ್ಷರನ್ನೇ ಘೋಷಣೆ ಮಾಡಿ ಕೈಬಿಟ್ಟುಬಿಡಿ. ಗೋವಿಂದ ಕಾರಜೋಳರನ್ನು ಹೊಡೆಯಲು ಮುಂದಾದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಮಾಡಿದ್ದೀರಾ. ಯಾವ ದಿಕ್ಕಿನಲ್ಲಿ ಪಕ್ಷ ಹೋಗುತ್ತಿದೆ. ಇವರ ಉದ್ದೇಶ ಪಕ್ಷ ಕಟ್ಟಬೇಕೋ ಅಂಥಾನೋ, ಕಂಪೆನಿ ಕಟ್ಟಬೇಕು ಅಂಥಾನೋ. ಅಣ್ಣ ಕೇಂದ್ರ ಮಂತ್ರಿಯಾಗಲಿ, ಅಪ್ಪ ಉಪರಾಷ್ಟ್ರಪತಿಯಾಗಲಿ. ಈ ರೀತಿ ಪಕ್ಷ ನಡೆಸಲು ಆಗೋದಿಲ್ಲ. ವಿಜಯೇಂದ್ರ ಅವರನ್ನೇ ರಾಜ್ಯಾಧ್ಯಕ್ಷ ಮಾಡುವುದಾದರೆ ಮಾಡಿಬಿಡಿ. ಚುನಾವಣಾ ಪ್ರಕ್ರಿಯೆಗಳು ಬೇಡ, ನಿಮಗೆ ಬೇಕಾದವರನ್ನು ಮತದಾರರನ್ನಾಗಿ ಮಾಡೋದಾದರೆ ಮತದಾನ ಯಾಕೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅರುಣ್ ಸಿಂಗ್ ಎಂಬ ರಾಜ್ಯ ಉಸ್ತುವಾರಿ ಇದ್ದರು. ಅವರು ವಿಜಯೇಂದ್ರರನ್ನು ಹೊಗಳಿ ಹೊಗಳಿ ಸಾಕಷ್ಟು ಅನುಕೂಲ ಮಾಡಿಕೊಂಡು ಹೋದರು. ಪಕ್ಷ ಕಟ್ಟಲು ಎಲ್ಲರ ಸಲಹೆ ಬೇಕು. ಆದರೆ ನಿಮಗೆ ಬೇಕಾದ ನಾಲ್ವರ ಸಲಹೆಗಳಲ್ಲ. ಮಾಜಿ ಕೆಜೆಪಿಯಲ್ಲಿನ ನಿಷ್ಠರಿಗೆ ಮಾತ್ರ ಆದ್ಯತೆ. ಹೊಂದಾಣಿಕೆಯಿಂದ ಪಕ್ಷವನ್ನು ಬಲಿಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಒಟ್ಟಾಗಿ ಹೈಕಮಾಂಡ್‌ಗೆ ದೂರು
ತಟಸ್ಥ ಗುಂಪು ಸಹ ನಾಳೆ ಸಭೆಯಲ್ಲಿ ಭಾಗಿಯಾಗುವ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಎರಡು ಹಂತದ ಸಭೆ ನಡೆಯಲಿದೆ. ಅವರ ಜೊತೆ ಮಾತುಕತೆ ಮಾಡಿದ್ದೇವೆ. ಎಲ್ಲಾ ಒಟ್ಟಾಗಿ ಹೈಕಮಾಂಡ್‌ಗೆ ದೂರು ಕೊಡುತ್ತೇವೆ. ನಾಳೆ ಸಭೆಯಲ್ಲಿ ಏನು ಚರ್ಚೆ ಮಾಡಬೇಕೋ ಮಾಡುತ್ತೇವೆ ಎಂದರು.

Previous articleಬೆಳಗಾವಿ ಪಾಲಿಕೆ ಹಳೇ ಕಟ್ಟಡಕ್ಕೆ ಬೆಂಕಿ
Next articleಗೆಜೆಟೆಡ್ ಪ್ರೊಬೆಷನರಿ ಹುದ್ದೆ ಪರೀಕ್ಷೆಗೆ ೧೦ ಕೃಪಾಂಕಕ್ಕೆ ಅಸ್ತು