ಗಾಬರಿಯೊಂದಿಗೆ ಆಶ್ಚರ್ಯಗೊಂಡ ಮನೆಯೊಡತಿ: ಪೊಲೀಸರಿಂದ ಮತ್ತಷ್ಟು ಶೋಧ
ಸಹೋದರನ ಆಸ್ಪತ್ರೆ ಚಿಕಿತ್ಸೆಗೆ ಮಾಡಿಕೊಂಡಿದ್ದ ಲಕ್ಷಾಂತರ ರೂಪಾಯಿ ಸಾಲ ತೀರಿಸಲು ಮನೆ ಕಳ್ಳತನ ಮಾಡಲು ಯತ್ನಿಸಿದ ಯೋಧ ಅರ್ಜುನ ಗಾಡಿವಡ್ಡರ ಹಾಗು ಅಳಿಯ ಸುನೀಲ ಗಾಡಿವಡ್ಡರ ಸಿಕ್ಕಿ ಬಿದ್ದಿರುವ ಘಟನೆ ತುಂಬಾ ಬೇಸರ ತರುವಂಥದ್ದು.17 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಯೋಧನಾಗಿ ದೇಶದ ಗಡಿ ಭಾಗಗಳಲ್ಲಿ ಸೇವೆ ಸಲ್ಲಿಸಿ ಕಳೆದೆರಡು ತಿಂಗಳ ಹಿಂದೆ ದೆಹಲಿಯ ಆರ್ಮಿ ಸಪ್ಲ್ಯೈ ಕೇರ್(ಎಎಸ್‌ಸಿ) ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ. ರಜೆ ನಿಮಿತ್ತ ರಾಮಪೂರದ ತಹಶೀಲ್ದಾರ ಕಚೇರಿ ಹಿಂಭಾಗದಲ್ಲಿರುವ ಸ್ವಂತ ಮನೆಗೆ ಆಗಮಿಸಿದ್ದ. ಖಾಸಗಿ ಸಾಲಗಾರರ ಕಿರುಕುಳ ಹಾಗು ಬ್ಯಾಂಕ್‌ಗಳ ಸಾಲ ತೀರಿಸಲು ಸಾಧ್ಯವಾಗದ ಕಾರಣ ಕಳ್ಳತನಕ್ಕೆ ಇಳಿದ ಪ್ರಸಂಗ ಓರ್ವ ದೇಶ ಕಾಯುವ, ಪ್ರಬುದ್ಧ ವ್ಯಕ್ತಿಯ ಮನಸ್ಥಿತಿ ಬದಲಾಗಿರುವದು ನಿಜಕ್ಕೂ ಖೇಧಕರ.
ಖಚಿತ ಮಾಹಿತಿಯೊಂದಿಗೆ ಕಳ್ಳತನ: ರಬಕವಿ ವಿದ್ಯಾನಗರದ ದಸ್ತು ಬರಹಗಾರ ಶಿವಾನಂದ ಕೋಲಿಯವರ ಮನೆಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಖಚಿತ ಮಾಹಿತಿಯೊಂದಿಗೆ, ಮಾಲಿಕ ಕೋಲಿಯವರು ತೇರದಾಳದ ಉಪನೊಂದಣಿ ಇಲಾಖೆಗೆ ಕೆಲಸಕ್ಕೆಂದು ತೆರಳುವದನ್ನು ಖಚಿತ ಮಾಡಿಕೊಂಡೇ ಮನೆಯಲ್ಲಿ ಅವರ ಪತ್ನಿ, ಪುಟ್ಟ ಮಗು ಇದ್ದದ್ದನ್ನು ಗಮನಿಸಿಯೇ ಕಳ್ಳತನಕ್ಕೆ ಇಳಿದಿದ್ದಾರೆ. ಇಷ್ಟೆಲ್ಲ ಮಾಹಿತಿಯಿರಲು ಪ್ರಮುಖ ಕಾರಣ ಈ ಮೊದಲು ಒಂದೇ ಗಲ್ಲಿಯ ನಿವಾಸಿಗಳಾಗಿದ್ದರು ಎನ್ನಲಾಗಿದ್ದು, ಇವರ ಸಂಪೂರ್ಣ ಮಾಹಿತಿ ಆರೋಪಿಗಳಿಗಿದೆ.
ಮನೆಯೊಡತಿ ಗಾಬರಿ, ಆಶ್ಚರ್ಯ: ಮುಸುಕುಧಾರಿಯಾಗಿ ಮನೆಯೊಳಗೆ ನುಗ್ಗಿದ ಖದೀಮರಿಬ್ಬರು ಮಾರಕಾಸ್ತ್ರಗಳಿಂದ ಬೆದರಿಸಿದ್ದನ್ನು ಕಂಡು ತೀವ್ರ ಗಾಬರಿಗೊಂಡ ಗೃಹಣಿಗೆ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ಮುಖವಾಡ ಕಳಚಿದ ನಂತರ ಇವರನ್ನು ಕಂಡು ಆಶ್ಚರ್ಯರಾಗಿದ್ದಾರೆ. ಪರಿಚಿತರಿಂದಲೇ ಕೃತ್ಯ ನಡೆದಿರುವದು ತೀವ್ರ ಆತಂಕಕ್ಕೆ ಕಾರಣವಾಗಿದೆ.
ಪೊಲೀಸರಿಂದ ಪಂಚನಾಮೆ: ಪ್ರಕರಣ ಬೇಧಿಸಿದ ಪೊಲೀಸರು ಶನಿವಾರ ಆರೆಗಳ ಮನೆ ಸೇರಿದಂತೆ ಇತರೆ ಮಾಹಿತಿ ಕಲೆ ಹಾಕಿದ್ದು, ಪೊಲೀಸ್ ಮೂಲಗಳ ಪ್ರಕಾರ ಆರೋಪಿತರಿಂದ ಈ ಹಿಂದೆ ಯಾವದೇ ಕಳ್ಳತನ ನಡೆದಿಲ್ಲ. ಮನೆಯಲ್ಲಿನ ಆರ್ಥಿಕ ಸಮಸ್ಯೆಗೆ ಇಂತಹ ಕೆಟ್ಟ ಸಾಹಸಕ್ಕೆ ಕೈ ಹಾಕಿದ್ದಾರೆಂದು ಪ್ರಾಥಮಿಕ ವರದಿಯಲ್ಲಿ ತಿಳಿದು ಬಂದಿದೆ.
ಒಟ್ಟಾರೆ ಯೋಧನೊಬ್ಬನಿಂದ ಇಂತಹ ಕೃತ್ಯ ನಡೆದಿರುವದು ತಾಲೂಕಿನ ಜನತೆಗೆ ತೀವ್ರ ಬೇಸರವಾಗಿದೆ. ಅಲ್ಲಲ್ಲಿ ಕಳ್ಳತನ ನಡೆಯುತ್ತಿರುವ ಹಿನ್ನಲೆ ಯಾರನ್ನು ನಂಬಬೇಕೆಂಬುದೇ ಯಕ್ಷ ಪ್ರಶ್ನೆ ಎಂಬುದು ಸಾರ್ವಜನಿಕರ ಮಾತು.