ಬಳ್ಲಾರಿ/ಕಂಪ್ಲಿ: ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಬಿಜೆಪಿ ಬಿ ಟೀಂ ನಿಂದ ವಕ್ಫ ವಿರುದ್ದದ ೨.೦ ಹೋರಾಟ ಬಳ್ಳಾರಿಯಿಂದ ಆರಂಭಿಸಲಾಯಿತು.
ಬಳ್ಳಾರಿಯ ಕಂಪ್ಲಿ ತಾಲೂಕು ಕೆಂದ್ರದಿಂದ ಜನಜಾಗೃತಿ ಮೆರವಣಿಗೆಗೆ
ಬಿಜೆಪಿ ಭಿನ್ನಮತೀಯ ಮಾಜಿ ಸಚಿವ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಶಾಸಕ ರಮೇಶ ಜಾರಕಿಹೊಳಿ, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ ಸೇರಿದಂತೆ ನಾಗರೀಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹೋರಾಟಕ್ಕೆ ಧುಮುಕಿದರು. ಭಿನ್ನರ ಗುಂಪಿನಲ್ಲಿ ಬಳ್ಳಾರಿಯ ಬಿಜೆಪಿ ಮುಖಂಡರು ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕಂಪ್ಲಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಕಾಲ್ನಡಿಗೆ ಮೂಲಕ ಮೆರವಣಿಗೆ ಚಾಲನೆ ನೀಡಲಾಯಿತು.
ಇಲ್ಲಿನ ಉದ್ಭವ ಗಣೇಶ ದೇವಸ್ಥಾನದಿಂದ ವಕ್ಫ್ ಹಠಾವೋ ದೇಶ ಬಚಾವೋ ಎಂಬ ಧ್ಯೇಯದೊಂದಿಗೆ ಜನ ಜಾಗೃತಿ ಸಭೆಯ ಮೆರವಣಿ ಆರಂಭಿಸಿ, ನಡುವಲ ಮಸೀದಿ, ಡಾ.ರಾಜಕುಮಾರ ರಸ್ತೆ, ಅಂಬೇಡ್ಕರ್ ವೃತ್ತ, ಮಹಾತ್ಮಗಾಂಧಿ ವೃತ್ತದ ಮೂಲಕ ಸರ್ಕಾರಿ ಆಸ್ಪತ್ರೆ ಬಳಿಯ ಶಾರದಾ ಶಾಲೆಗೆ ಆಗಮಿಸಿ, ನಂತರ ಸಭೆ ಆರಂಭಿಸಲಾಯಿತು. ಇಲ್ಲಿನ ಮೆರವಣಿಗೆಯಲ್ಲಿ ವಕ್ಫ್ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.
ಈ ಸಂದರ್ಭದಲ್ಲಿ ಹಂಪಿ ಮಾತಂಗ ಪರ್ವತದ ಪೂರ್ಣಾನಂದ ಸ್ವಾಮೀಜಿ, ಅಭಿನವ ಪ್ರಭುಸ್ವಾಮಿ, ಮುಖಂಡರಾದ ಜಿ.ಎಂ.ಸಿದ್ದೇಶ್ವರ, ಬಿ.ವಿ.ನಾಯಕ್ ಸೇರಿದಂತೆ ನಾಗರೀಕ ಹಿತರಕ್ಷಣಾ ಸಮಿತಿಯ ಸಂಚಾಲಕ ಎಂ.ಭರತ್ ಹಾಗೂ ಗಣ್ಯರು ಮತ್ತು ರೈತರು ಪಾಲ್ಗೊಂಡಿದ್ದರು.
ಸಭೆಯಿಂದ ದೂರ ಉಳಿದ ಬಿಜೆಪಿಗರು : ವಕ್ಫ್ ವಿರುದ್ಧ ಕಂಪ್ಲಿ ನಗರದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆಯಿಂದ ಸ್ಥಳೀಯ ಬಿಜೆಪಿ ಮುಖಂಡರು ದೂರ ಉಳಿದಿರುವುದು ಕಂಡು ಬಂತು. ನಾಗರೀಕ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಹಾಗೂ ರೈತರು ಮತ್ತು ಕೆಲ ಸಂಘ-ಸಂಸ್ಥೆಯವರು ಬೆಂಬಲ ನೀಡಿದರು.