ಭಾಷಾಂತರದ ಸಮಸ್ಯೆಯಿಂದಲೇ ಮರುಪರೀಕ್ಷೆಗೆ ಆಗ್ರಹಿಸಲಾಗಿದ್ದರೂ, ಮತ್ತೆ ಮತ್ತೆ ಅದೇ ಕಾರಣದಿಂದ ಗೊಂದಲ ಉಂಟಾದರೆ ಉದ್ಯೋಗಾಕಾಂಕ್ಷಿಗಳ ತೊಂದರೆ
ಬೆಂಗಳೂರು: ಹಲವಾರು ಗೊಂದಲಗಳ ಮಧ್ಯೆ ನಡೆಸಲಾಗಿರುವ ಕೆ.ಎ.ಎಸ್ ಮರು ಪರೀಕ್ಷೆಯಲ್ಲಿಯೂ ಅನೇಕ ಅವಾಂತರಗಳಾಗಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಲೋಕಸೇವಾ ಆಯೋಗವು ಉದ್ಯೋಗಾಕಾಂಕ್ಷಿಗಳ ಮತ್ತು ರಾಜ್ಯದ ಜನತೆಯ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿದೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಅತ್ಯಂತ ಪಾರದರ್ಶಕತೆ, ಗೊಂದಲರಹಿತ ಪರೀಕ್ಷೆ ನಡೆಸಬೇಕಾಗಿದ್ದ ಆಯೋಗದ ತಪ್ಪಿನಿಂದಾಗಿ ಎರಡೆರಡು ಬಾರಿ ಪರೀಕ್ಷೆ ನಡೆಸಿದ ನಂತರವೂ ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ನ್ಯಾಯ ದೊರಕದೇ ಇರುವುದು ಅಕ್ಷಮ್ಯ. ಕನ್ನಡವನ್ನೇ ಸ್ಪಷ್ಟವಾಗಿ ಭಾಷಾಂತರ ಮಾಡಲಾಗದ ಕರ್ನಾಟಕ ಲೋಕಸೇವಾ ಆಯೋಗದಿಂದ, ಕನ್ನಡ & ಕನ್ನಡಿಗರ ಹಿತರಕ್ಷಣೆ ಸಾಧ್ಯವೇ ? ಕೆ.ಪಿ.ಎಸ್.ಸಿ ಯ ಗೊಂದಲದಿಂದ ಕೆ.ಎ.ಎಸ್ ನ ಮೊದಲ ಪರೀಕ್ಷೆಗೆ ಶೇ 62ರಷ್ಟು ಜನರು ಪರೀಕ್ಷೆಗೆ ಹಾಜರಾದರೆ, ಮರು ಪರೀಕ್ಷೆ ವೇಳೆ ಅದು ಕೇವಲ ಶೇ. 48ಕ್ಕೆ ಕುಸಿದಿರುವುದು ಆಯೋಗದ ನಿಷ್ಕ್ರಿಯತೆ ಅನಿಯಮಿತ ಅವಾಂತರಗಳಿಗೆ ಸಾಕ್ಷಿ. ಭಾಷಾಂತರದ ಸಮಸ್ಯೆಯಿಂದಲೇ ಮರುಪರೀಕ್ಷೆಗೆ ಆಗ್ರಹಿಸಲಾಗಿದ್ದರೂ, ಮತ್ತೆ ಮತ್ತೆ ಅದೇ ಕಾರಣದಿಂದ ಗೊಂದಲ ಉಂಟಾದರೆ ಉದ್ಯೋಗಾಕಾಂಕ್ಷಿಗಳ ತೊಂದರೆಗೆ, ಪರೀಕ್ಷಾ ವೈಫಲ್ಯಕ್ಕೆ ಮುಖ್ಯಮಂತ್ರಿಗಳೇ ಹೊಣೆ ಹೊರಬೇಕಾಗುತ್ತದೆ. ಮುಖ್ಯಮಂತ್ರಿಗಳೇ ನೇಮಿಸುವ ಐ.ಎ.ಎಸ್ ಮಟ್ಟದ ಕಾರ್ಯದರ್ಶಿ ಹಾಗೂ ಪರೀಕ್ಷಾ ನಿಯಂತ್ರಣಾಧಿಕಾರಿ ಕೆಪಿಎಸ್ಸಿ ಪರೀಕ್ಷೆಗಳನ್ನು ನಿಭಾಯಿಸುತ್ತಾರೆ. ಆದ್ದರಿಂದ ಕೆಪಿಎಸ್ಸಿ ಪರೀಕ್ಷಾ ವೈಫಲ್ಯದ ಜವಾಬ್ದಾರಿಯನ್ನು ಸ್ವತಃ ಮುಖ್ಯಮಂತ್ರಿಗಳೇ ಹೊತ್ತು, ಆಯೋಗದ ಕಾರ್ಯವೈಖರಿಯಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತರುವಂತೆ ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸುತ್ತೇನೆ ಎಂದಿದ್ದಾರೆ.