ಸಿಎಂ ಸಿದ್ದರಾಮಯ್ಯ ಕುತಂತ್ರದಿಂದಲೇ ರಾದ್ಧಾಂತ

0
32

ಹುಬ್ಬಳ್ಳಿ: ೨ಎ ಮೀಸಲಾತಿ ಹೋರಾಟ ಮಾಡುತ್ತಿದ್ದ ಮುಗ್ಧ ಪಂಚಮಸಾಲಿ ಸಮಾಜದವರ ಮೈಮೇಲೆ ರಕ್ತ ತರಿಸಿದ ಕಾಂಗ್ರೆಸ್ ಸರ್ಕಾರ ಗಾಯಾಳುಗಳ ಕಣ್ಣೀರಿನಿಂದಲೇ ಪತನವಾಗಲಿದೆ. ಮುಂದಿನ ದಿನಗಳಲ್ಲಿ ಸಮಾಜ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದೆ ಎಂದು ಮಾಜಿ ಸಚಿವ ಶಂಕರಪಾಟೀಲ ಮುನೇನಕೊಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳ ನೇತೃತ್ವದಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ತಲೆ ಒಡೆಯುವುದು, ಕೈ-ಕಾಲು ಮುರಿಯುವುದು ಎಷ್ಟು ಸರಿ…? ಸ್ವಾಮೀಜಿಗಳನ್ನು ಬಂಧಿಸುವ ಅವಶ್ಯಕತೆ ಏನಿತ್ತು. ಲಾಠಿ ಚಾರ್ಜ್ ಮಾಡಲು ಅಲ್ಲಿದ್ದವರು ಗಲಭೆಕೋರರಲ್ಲ. ಅವರೆಲ್ಲ ತಮ್ಮ ಹಕ್ಕಿಗಾಗಿ ಹೋರಾಟಕ್ಕೆ ಬಂದವರು. ಈ ಹಿಂದೆ ನವಲಗುಂದ-ನರಗುಂದದಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಕ್ಕೆ ಅಂದಿನ ಗುಂಡೂರಾವ್ ಸರ್ಕಾರ ಪತನವಾಗಿತ್ತು. ಇವತ್ತು ಪಂಚಮಸಾಲಿ ಸಮುದಾಯದ ಮುಗ್ಧ ಜನರ ಮೇಲೆ ದರ್ಪ ತೋರಿದ್ದಕ್ಕಾಗಿ ಈ ಸರ್ಕಾರವೂ ಪತನವಾಗಲಿದೆ ಎಂದು ರಾಜ್ಯ ಸರ್ಕಾರದ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ ಕುತಂತ್ರದಿಂದಲೇ ಮಂಗಳವಾರ ರಾದ್ಧಾಂತ ನಡೆದಿದೆ. ಬಿಜೆಪಿ ಆಡಳಿತಾವಧಿಯಲ್ಲೂ ಹೋರಾಟ ನಡೆದಿದೆ. ಲಕ್ಷಾಂತರ ಜನ ಸೇರಿದ್ದರೂ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲಾಗಿತ್ತು. ಆದರೆ, ಮಂಗಳವಾರ ಬೆಳಗಾವಿಯಲ್ಲಿ ನಡೆದ ಘಟನೆ ಮನಸ್ಸಿಗೆ ನೋವನ್ನುಂಟು ಮಾಡಿದೆ. ಅಲ್ಲದೇ, ಮುಖ್ಯಮಂತ್ರಿಗಳ ನಿಲುವು ಸ್ಪಷ್ಟವಾದಂತಾಗಿದೆ ಎಂದು ವಿಷಾದಿಸಿದರು.

Previous articleಪಾಠ ಕೇಳುತ್ತಲೇ ಪ್ರಾಣ ಬಿಟ್ಟ ವಿದ್ಯಾರ್ಥಿನಿ
Next articleಪಂಚಭೂತಗಳಲ್ಲಿ ಎಸ್‌.ಎಂ. ಕೃಷ್ಣ ಲೀನ