ಬಾಗಲಕೋಟೆ: ಯುಕೆಪಿ ಮೂರನೇ ಹಂತದ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಆರಂಭಗೊಂಡಿರುವ ಹೋರಾಟ ಮೂರನೇ ದಿನಕ್ಕೆ ತೀವ್ರ ಸ್ವರೂಪ ಪಡೆದಿದೆ. ಸಂತ್ರಸ್ತರು ಹೆದ್ದಾರಿ ತಡೆ ನಡೆಸಿದಲ್ಲದೇ ಜಿಲ್ಲೆಯ ಬೀಳಗಿಯಲ್ಲಿ ಭೂಸ್ವಾಧೀನ ಕಚೇರಿ ಹಾಗೂ ಬಾಗಲಕೋಟೆಯಲ್ಲಿ ಪುನರ್ವಸತಿ ಹಾಗೂ ಪುನರ್‌ನಿರ್ಮಾಣ(ಆರ್ ಆ್ಯಂಡ್ ಆರ್) ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.
ಹೋರಾಟ ಮತ್ತಷ್ಟು ಉಗ್ರ ಸ್ವರೂಪ ಪಡೆಯುವ ಮುನ್ಸೂಚನೆ ಇದ್ದು, ಹೋರಾಟದ ವೇದಿಕೆಯಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕದ ಕೂಗು ಸಹ ಮುನ್ನೆಲೆಗೆ ಬರುತ್ತಿದೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ತೇರದಾಳದ ಬಿಜೆಪಿ ಶಾಸಕ ಸಿದ್ದು ಸವದಿ ಅವರು ಮಾತನಾಡಿ, ಉತ್ತರ ಕರ್ನಾಟಕದ ಬಗ್ಗೆ ಇಂಥದೇ ನಿರ್ಲಕ್ಷ್ಯ ಧೋರಣೆ ಮುಂದವರಿದಲ್ಲಿ ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯವಾಗಲಿದೆ. ಅದಕ್ಕೆ ತಮ್ಮ ಸಹಮತವೂ ಇದೆ ಎಂದು ಬಹಿರಂಗವಾಗಿ ಘೋಷಿಸಿದ್ದಾರೆ.
ಬೀಳಗಿಯಲ್ಲಿ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ರೈತರು ಹುಬ್ಬಳ್ಳಿ-ಸೊಲ್ಲಾಪುರ ಹೆದ್ದಾರಿಯ ಬೀಳಗಿ ಕ್ರಾಸ್‌ನಲ್ಲಿ ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಅಲ್ಲಿಂದ ವಿಶೇಷ ಭೂಸ್ವಾಧೀನಾಧಿಕಾರಿಗಳ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಇತ್ತ ಜಿಲ್ಲಾ ಕೇಂದ್ರ ಬಾಗಲಕೋಟೆಯಲ್ಲಿ ನಡೆಯುತ್ತಿರುವ ಧರಣಿಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳು, ಹಿರಿಯ ವಕೀಲರು ಪಾಲ್ಗೊಂಡು ಬೆಂಬಲ ಸೂಚಿಸಿದರು. ನಂತರ ಧರಣಿ ಸ್ಥಳದಿಂದ ನೂರಾರು ಸಂಖ್ಯೆಯಲ್ಲಿ ಪಾದಯಾತ್ರೆ ಮೂಲಕ ಆರ್ ಆ್ಯಂಡ್‌ಆರ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಕಚೇರಿ ನುಗ್ಗಲು ಯತ್ನಿಸಿದರು. ಮೊದಲೇ ಪ್ರತಿಭಟನೆಯ ಸುಳಿವು ಅರಿತಿದ್ದ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಗೌರವಾಧ್ಯಕ್ಷ ಅಜಯಕುಮಾರ ಸರನಾಯಕ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಯುಕೆಪಿ ಆರ್ ಆ್ಯಂಡ್ ಆರ್ ಸಿಬ್ಬಂದಿ ಹಳ್ಳಿಗಳಲ್ಲಿ ಓಡಾಡಿ ತಾವೇ ರಾಜಕಾರಣಿಗಳಂತೆ ಇಲ್ಲದ ಆಮಿಷ ತೋರಿಸಿದ್ದೀರಿ, ಇಂದು ನ್ಯಾಯಾಲಯಕ್ಕೆ ತಪ್ಪು ಅಫಿಡೆವಿಟ್‌ಗಳನ್ನು ಸಲ್ಲಿಸುತ್ತೀರಿ. ನಿಮ್ಮ ಮೇಲೆ ನ್ಯಾಯಾಂಗ ನಿಂದನೆ ದಾವೆ ಹೂಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಹೋರಾಟ ಸಮಿತಿ ಅಧ್ಯಕ್ಷ ಅದೃಶ್ಯಪ್ಪ ದೇಸಾಯಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ ಅಂತರಗೊಂಡ, ಎಸ್.ಟಿ.ಪಾಟೀಲ, ಮೋಹನ ಜಾಧವ ಮತ್ತಿತರರು ನೇತೃತ್ವ ವಹಿಸಿದ್ದರು.