ಸಿದ್ದು ಇರೋವರೆಗೂ ಡಿಕೆಸಿ ಸಿಎಂ ಅಸಾಧ್ಯ

0
29

ದಾವಣಗೆರೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಕೀಯ ಜೀವನದಲ್ಲಿ ಇರುವವರೆಗೂ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗುವುದಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ ಭವಿಷ್ಯ ನುಡಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈಕಮಾಂಡ್ ಎರಡೂವರೆ ವರ್ಷ ಆದ ಮೇಲೆ ಮುಖ್ಯಮಂತ್ರಿ ಬದಲಾವಣೆ ಎಂದು ನಮ್ಮ ಮತ್ತು ಅವರ ಮಧ್ಯೆ ಒಪ್ಪಂದ ಆಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇವರು ಆ ರೀತಿ ಒಪ್ಪಂದ ಆಗಿಲ್ಲ ಮುಂದೆಯೂ ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿದ್ದರು. ಈ ರಾಜ್ಯದಲ್ಲಿ ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಂಬರ್ ಒನ್ ಆಗಿದ್ದಾರೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ ಅವರು ೨೦೧೪ರಲ್ಲಿ ಮುಂದಿನ ಚುನಾವಣೆಯಲ್ಲಿ ನಿಲ್ಲುವುದಿಲ್ಲ. ಇದೇ ನನ್ನ ಕೊನೆ ಚುನಾವಣೆ ಎಂದು ಹೇಳಿದ್ದರು. ೨೦೧೮ರಲ್ಲೂ ನಿಂತಿದ್ದರು. ೨೦೧೮ ಆದ ಮೇಲೆ ಇನ್ನೂ ಯಾವೋತ್ತು ನಿಲ್ಲೋಲ್ಲ ಎಂದಿದ್ದರು. ಈಗ ತಿರುಗಿ ೨೦೨೪ರಲ್ಲಿ ನಿಂತು ಮುಖ್ಯಮಂತ್ರಿ
ಆಗಿದ್ದಾರೆ. ‘ಅವರದ್ದು ರಾತ್ರಿ ಮಾತಿದ್ದಂಗೆ, ಅದಕ್ಕೆ ಬೆಳಗ್ಗೆ ಖಾತ್ರಿ ಇರುವುದಿಲ್ಲ’. ಈ ರೀತಿಯ ನಡುವಳಿಕೆ ಅವರದ್ದಾಗಿದೆ. ಏನಾದರೂ ಕಾಂಗ್ರೆಸ್‌ನ ಒಳಗೆ ಒಪ್ಪಂದ ಆಗಿರುವುದರಿಂದ ನಮಗೆ ಅದರ ಸಂಬಂಧ ಇಲ್ಲ ಎಂದು ಹೇಳಿದರು.
ಒಂದಂತೂ ಸತ್ಯ, ಚನ್ನಪಟ್ಟಣದಲ್ಲಿ ದೊಡ್ಡ ಭಾಷಣ ಮಾಡಿದರು. ಯೋಗೇಶ್ವರನನ್ನು ಗೆಲ್ಲಿಸಿದರೆ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಎಂದು ಹೇಳಿದರು. ಈಗ ಅವರು ಗೆದ್ದಿದ್ದಾರೆ. ಅದರ ಪ್ರಕಾರ ಅವರು ಮುಖ್ಯಮಂತ್ರಿ ಆಗಬೇಕಲ್ಲಾ?. ಆದರೆ ಸಿದ್ದರಾಮಯ್ಯ ರಾಜಕೀಯ ಜೀವನದಲ್ಲಿ ಇರುವವರೆಗೂ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವುದಕ್ಕೆ ಬಿಡುವುದಿಲ್ಲ ಎಂದು ತಿಳಿಸಿದರು.

Previous articleಮುಡಾ ಪ್ರಕರಣ: ಸಿಎಂ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ
Next articleಹಾಸನದ ಸಮಾವೇಶ ಕೇವಲ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶನ ಹೊರತು, ಬೇರೇನಿಲ್ಲ