Home ತಾಜಾ ಸುದ್ದಿ ಸಿದ್ದುಗೆ ಮತ್ತೊಂದು ಸಂಕಷ್ಟ

ಸಿದ್ದುಗೆ ಮತ್ತೊಂದು ಸಂಕಷ್ಟ

0
76

ಬೆಂಗಳೂರು: ಸಿಎಂ ಸಿದ್ದರಾಮಯ್ಯಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಸಿಬಿಐ ಉಲ್ಲೇಖಿಸಿ ಮುಡಾಕ್ಕೆ ಸಂಬಂಧಿಸಿದ ಮತ್ತೊಂದು ಪ್ರಕರಣದ ವಿವರಣೆ ಕೇಳಿ ರಾಜ್ಯಪಾಲರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ವಿಶೇಷವಾಗಿ ಈ ಪತ್ರದಲ್ಲಿ ಸಿಬಿಐ ಹೆಸರು ಉಲ್ಲೇಖಿಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ.
ಮುಡಾ ಹಗರಣದಲ್ಲಿ ಈಗಾಗಲೇ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿಯನ್ನು ನೀಡಿದ್ದಾರೆ. ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ಆದೇಶ ಹೊರಬೀಳುವ ಮುನ್ನವೇ, ಮುಡಾದಿಂದಲೇ ನಡೆದಿರುವ ಮತ್ತೊಂದು ದುರ್ಬಳಕೆ ಪ್ರಕರಣದ ದೂರಿನ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ದಾಖಲೆಗಳ ಸಹಿತ ವಿವರಣೆ ಕೇಳಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತೊಂದು ಪ್ರಯತ್ನಕ್ಕೆ ಗವರ್ನರ್ ಮುಂದಾಗಿದ್ದಾರೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಸಿಎಸ್‌ಗೆ ಗವರ್ನರ್ ಪತ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾದ ನಿವೃತ್ತ ಅಧಿಕಾರಿ ಪಿ.ಎಸ್ ನಟರಾಜ್ ಎಂಬುವರು ಆಗಸ್ಟ್ ೨೭ ರಂದು ರಾಜ್ಯಪಾಲರಿಗೆ ದೂರು ನೀಡಿದ್ದರು. ಅದಕ್ಕೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ರಾಜ್ಯಪಾಲರು ಮುಖ್ಯ ಕಾರ್ಯದರ್ಶಿಗೆ ಸೆಪ್ಟಂಬರ್ ೫ರಂದೇ ಪತ್ರ ಬರೆದಿದ್ದಾರೆ. ಮೈಸೂರಿನ ಪಿ.ಎಸ್ ನಟರಾಜ್ ಅವರು ವಿವರವಾದ ಪ್ರಾತಿನಿಧ್ಯವನ್ನು ಸಲ್ಲಿಸಿದ್ದು ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡಿರುತ್ತಾರೆ. ಇದರಲ್ಲಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಮುಖ್ಯಮಂತ್ರಿಗಳ ಮೌಖಿಕ ಸೂಚನೆಯ ಮೇರೆಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯಿದೆ ೧೯೮೭ರ ಕಲಂ ೧೫ ಮತ್ತು ೨೫ರ ಅನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಕ್ಷೇತ್ರವಾದ ವರುಣಾ ಹಾಗೂ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ೭೫ ಕೋಟಿ ರೂ.ಗಳ ಕಾಮಗಾರಿ ಹಮ್ಮಿಕೊಂಡಿತ್ತು ಎಂದು ಉಲ್ಲೇಖಿಸಲಾಗಿದೆ ಎಂದು ರಾಜ್ಯಪಾಲರ ಪತ್ರದಲ್ಲಿ ಹೇಳಿದ್ದಾರೆ.
ಗಂಭೀರ ಸ್ವರೂಪ ಆರೋಪ: ಮುಖ್ಯಮಂತ್ರಿಗಳ ವಿರುದ್ಧ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿರುವುದರಿಂದ, ಆದಷ್ಟು ಬೇಗ ಈ ವಿಷಯವನ್ನು ಪರಿಶೀಲಿಸಲು ಮತ್ತು ವಿವರವಾದ ವರದಿಯನ್ನು ದಾಖಲೆಗಳೊಂದಿಗೆ ಸಲ್ಲಿಸಲು ನಿರ್ದೇಶಿಸಲಾಗಿದೆ ಎಂದು ರಾಜ್ಯಪಾಲರು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಿಬಿಐನಿಂದ ತನಿಖೆ ನಡೆಸುವಂತೆ ಅರ್ಜಿದಾರರು ಕೋರಿರುವುದು ಹಾಗೂ ಅದನ್ನು ರಾಜ್ಯಪಾಲರು ತಮ್ಮ ಪತ್ರದಲ್ಲಿಯೂ ಉಲ್ಲೇಖಿಸಿರುವುದು ಕುತೂಹಲ ಮೂಡಿಸಿದೆ. ಈ ಪತ್ರ ಸಿಎಂ ಸಿದ್ದರಾಮಯ್ಯ ಅವರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದೆ.
ಮುಡಾಗೆ ಸಂಬಂಧಿಸಿದ ಮತ್ತೊಂದು ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ವಿವರಣೆ ಕೇಳಿರುವುದು ರಾಜಭವನ ಹಾಗೂ ಸರ್ಕಾರದ ನಡುವಿನ ಸಂಘರ್ಷ ತಾರಕಕ್ಕೇರುವಂತೆ ಮಾಡಲಿದೆ. ಹಾಗಾಗಿ ಒಂದು ವೇಳೆ ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಕೋರ್ಟ್ ಅನುಮತಿಯನ್ನು ನಿರಾಕರಿಸಿದರೆ, ಸಿಎಂ ವಿರುದ್ಧ ಮತ್ತೊಂದು ಅಸ್ತ್ರವನ್ನು ರಾಜಭವನ ಸಿದ್ಧಪಡಿಸಿಕೊಳ್ಳುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.