ದೆಹಲಿಯಲ್ಲಿ ಅಕ್ಟೋಬರ್‌ನಿಂದ ನಂದಿನಿ ಹಾಲು, ಮೊಸರು ಮಾರಾಟ ಆರಂಭ

ಬೆಂಗಳೂರು: ಕನ್ನಡಿಗರ ಹಾಲು ಉತ್ಪನ್ನಗಳ ನಂದಿನಿ ಬ್ರ್ಯಾಂಡ್ ಉತ್ತರ ಭಾರತಕ್ಕೆ ಲಗ್ಗೆ ಇಡುತ್ತಿದೆ. ಅಕ್ಟೋಬರ್‌ನಲ್ಲಿ ದೆಹಲಿಯಲ್ಲಿ ಹಾಲು ಮತ್ತು ಮೊಸರು ಮಾರಾಟವನ್ನು ಕರ್ನಾಟಕ ಹಾಲು ಒಕ್ಕೂಟ (ಕೆಎಂಎಫ್) ಆರಂಭಿಸಲಿದೆ.
ದೇಶದ ಬಹುತೇಕ ಭಾಗಗಳಲ್ಲಿ ಹಸುವಿನ ಹಾಲಿನ ಬೇಡಿಕೆ ಮತ್ತು ಬಳಕೆ ಅಧಿಕಗೊಂಡಿದೆ. ಇದು ಕೆಎಂಎಫ್ ತನ್ನ ವ್ಯವಹಾರವನ್ನು ವಿಸ್ತರಿಸಲು ಸೂಕ್ತವಾಗಿದೆ. ಅಕ್ಟೋಬರ್ ಮೊದಲ ವಾರದಿಂದ ನೀಲಿ, ಹಸಿರು, ಕೆಂಪು ಮತ್ತು ಕಿತ್ತಳೆ ಮಾದರಿಯ ಹಾಲಿನ ಪಾಕೆಟ್‌ಗಳು ದೆಹಲಿ ಮಾರುಕಟ್ಟೆ ಪ್ರವೇಶಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಿತ್ಯ ೨ ಲಕ್ಷ ಲೀಟರ್ ಹಾಲು ಮಾರಾಟ: ಮೊದಲ ಆರು ತಿಂಗಳ ಕಾಲ ನಿತ್ಯ ಸುಮಾರು ೨ ಲಕ್ಷ ಲೀಟರ್ ಹಾಲು ಮಾರಾಟ ಮಾಡಿ ಕ್ರಮೇಣ ಅದನ್ನು ವಿಸ್ತರಿಸುವ ಗುರಿ ಹೊಂದಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ.ಕೆ.ಜಗದೀಶ್ ತಿಳಿಸಿದರು.
ಕಂಪನಿ ಗುಡ್‌ಲೈಫ್ ಬ್ರಾಂಡ್ ಮಾತ್ರವಲ್ಲದೆ ಪ್ರತಿದಿನವೂ ಮಾರಾಟದೊಂದಿಗೆ ನೇರ ಮಾರಾಟಕ್ಕಾಗಿ ಉತ್ತರ ಭಾರತದ ರಾಜ್ಯಗಳತ್ತ ಸಾಗುತ್ತಿರುವುದು ಇದೇ ಮೊದಲು ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಅಂಕಿಅಂಶಗಳ ಪ್ರಕಾರ, ಮದರ್ ಡೈರಿ ಪ್ರತಿದಿನ ಸುಮಾರು ೧೦ ಲಕ್ಷ ಲೀಟರ್ ಹಸುವಿನ ಹಾಲನ್ನು ಮಾರಾಟ ಮಾಡುತ್ತದೆ. ಕೆಎಂಎಫ್ ಹಸುವಿನ ಹಾಲಿನ ಬ್ರಾಂಡ್ ಆಗಿದ್ದು, ದೆಹಲಿಯ ಮಾರುಕಟ್ಟೆಯಲ್ಲಿ ನಮಗೆ ಉತ್ತಮ ಅವಕಾಶವಿದೆ. ದಿನಕ್ಕೆ ಸುಮಾರು ೨೫,೦೦೦ ಲೀಟರ್‌ಗಳಷ್ಟು ಮೊಸರನ್ನು ಮಾರಾಟ ಮಾಡುವ ಗುರಿ ಹೊಂದಿದ್ದೇವೆ. ಚಿಲ್ಲರೆ ವ್ಯಾಪಾರಿಗಳು ಮತ್ತು ವ್ಯಾಪಾರಿಗಳ ಮೂಲಕ ಹಾಲು ಮೊಸರನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದೇವೆ. ಆನ್‌ಲೈನ್ ಮಾರಾಟವನ್ನು ಅಧಿಕಗೊಳಿಸುವ ನಿರ್ಧಾರ ಮಾಡಿದ್ದೇವೆ ಎಂದು ಅವರು ಹೇಳಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಮಾರಾಟದಲ್ಲಿ ಶೇ.೨೦ರಷ್ಟು ಪ್ರಗತಿಯಾಗಿದೆ. ಸದ್ಯಕ್ಕೆ ೧ ಕೋಟಿ ಲೀಟರ್ ಹಾಲು ಸಂಗ್ರಹವಾಗಿದ್ದು, ಕಳೆದ ಕೆಲವು ತಿಂಗಳುಗಳಿಂದ ಸಿಹಿ ತಿಂಡಿಗಳು ಮತ್ತು ಇತರ ಡೈರಿ ಉತ್ಪನ್ನಗಳ ಮಾರಾಟದಲ್ಲಿ ಹೆಚ್ಚಳವಾಗಿದೆ ಎಂದು ಕೆಎಂಎಫ್ ಅಧಿಕಾರಿಗಳು ತಿಳಿಸಿದ್ದಾರೆ.