ಬಳ್ಳಾರಿ ಜೈಲು: ದರ್ಶನ್ ಕೈದಿ ನಂ ೫೧೧

0
23

ಬೆಂಗಳೂರು/ಬಳ್ಳಾರಿ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್ ಅವರನ್ನು ಬಳ್ಳಾರಿ ಕೇಂದ್ರ ಕಾರಾಗೃಹ ಸೇರಿದಂತೆ ಇತರೆ ಆರೋಪಿಗಳನ್ನು ರಾಜ್ಯದ ವಿವಿಧ ಜೈಲುಗಳಿಗೆ ಗುರುವಾರ ಬೆಳಗಿನ ಜಾವ ಪರಪ್ಪನ ಅಗ್ರಹಾರದಿಂದ ಸ್ಥಳಾಂತರ ಮಾಡಲಾಯಿತು.
ಮೊದಲು ನಿಗದಿಪಡಿಸಿದ್ದ ಮಾರ್ಗವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಬದಲಾಯಿಸಿದ ಪೊಲೀಸರು ಅನಂತಪುರ ಮಾರ್ಗವಾಗಿ ಬಳ್ಳಾರಿ ತಲುಪಿದರು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ದರ್ಶನನ್ನು ಬೆಳಗ್ಗೆ ೪.೧೫ ಗಂಟೆಗೆ ಬಿಗಿ ಭದ್ರತೆಯಲ್ಲಿ ಬಳ್ಳಾರಿ ಜೈಲಿಗೆ ಟಿಟಿ ವಾಹನದಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಅನಂತಪುರ, ಉರವಕೊಂಡ ಮಾರ್ಗವಾಗಿ ಕಳುಹಿಸಲಾಯಿತು. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಹೊರಟ ನೀಲಿ ಬಣ್ಣದ ಬುಲೇರೋ ವಾಹನದಲ್ಲಿ ದರ್ಶನ್ ಅವರನ್ನು ಕರೆದುಕೊಂಡು ಹೋಗಲಾಯಿತು. ನಂತರ ಮಾರ್ಗ ಮಧ್ಯೆ ಟಿಟಿ ವಾಹನಕ್ಕೆ ದರ್ಶನ್‌ನನ್ನು ಸ್ಥಳಾಂತರಿಸಿ ಬೆಳಗ್ಗೆ ೯.೩೦ ರ ಸುಮಾರಿಗೆ ಬಳ್ಳಾರಿ ಸೆಂಟ್ರಲ್ ಜೈಲು ತಲುಪಿಸಲಾಯಿತು.
ಬಳ್ಳಾರಿ ವರದಿ: ಬೆಳಗ್ಗೆ ೯.೩೦ ಕ್ಕೆ ಬಳ್ಳಾರಿ ಜೈಲು ತಲುಪಿದರು. ಜೀನ್ಸ್‌ ಪ್ಯಾಂಟ್-ಕಪ್ಪು ಬಣ್ಣದ ಪ್ಯೂಮಾ ಟಿ-ಶರ್ಟ್ ಧರಿಸಿದ್ದ ದರ್ಶನ್ ತಮ್ಮ ಕೈಗೆ ಜಾಕೆಟ್ ಸುತ್ತಿಕೊಂಡಿದ್ದರು. ಜೈಲು ದ್ವಾರದ ಬಳಿ ಇರುವ ಎಂಟ್ರಿ ಪುಸ್ತಕದಲ್ಲಿ ಸಹಿ ಹಾಕಿದರು. ನಂತರ ವೈದ್ಯಾಧಿಕಾರಿಗಳು ದರ್ಶನ್ ಆರೋಗ್ಯ ತಪಾಸಣೆ ನಡೆಸಿದರು ಬಳಿಕ ಜೈಲಿನ ಅಧಿಕಾರಿಗಳು ದರ್ಶನ್ ಕೈಗೆ ಕಟ್ಟಿಕೊಂಡಿದ್ದ ದಾರ, ಕಡಗ, ಕೊರಳಲ್ಲಿನ ದಾರಗಳನ್ನು ತೆಗೆಸಿದರು. ನಂತರ ದರ್ಶನ್‌ಗೆ ೫೧೧ ನಂಬರ್ ನೀಡಲಾಯಿತು. ಬಳ್ಳಾರಿಯಲ್ಲಿ ದರ್ಶನ್ ಈಗ ಕೈದಿ ನಂ ೫೧೧.
ಲಾಠಿ ಪ್ರಹಾರ: ದರ್ಶನ್ ಬರುವ ಸುದ್ದಿ ತಿಳಿದು ಬಳ್ಳಾರಿ ಜೈಲು ಮಾರ್ಗದಲ್ಲಿ ಬರುವ ದುರ್ಗಮ್ಮನ ಗುಡಿ, ವಾಲ್ಮೀಕಿ ಸರ್ಕಲ್‌ನಲ್ಲಿ ನೂರಾರು ಅಭಿಮಾನಿಗಳು ಸೇರಿದ್ದರು. ಸಂಚಾರ ದಟ್ಟಣೆ ವಿಪರೀತ ಆಗಿತ್ತು. ಅಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ದರ್ಶನ್ ಅಭಿಮಾನಿಗಳು ಘೋಷಣೆ ಕೂಗುತ್ತ ಜೈಲು ಮಾರ್ಗವಾಗಿ ತೆರಳುತ್ತಿದ್ದಾಗ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದರು.

Previous articleಹಾಸ್ಯನಟ ಚಿಕ್ಕಣ್ಣಗೆ ವಿಚಾರಣೆ ಬಿಸಿ
Next articleಶರಾವತಿ ಉಳಿಸಿ ಹೊಸ ಯೋಜನೆ ಕೈಬಿಡಿ