ಕಳಸ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ತತ್ತರಿಸಿರುವ ಕಳಸದಲ್ಲಿ ಮಳೆ ನಿಲ್ಲಿಸು ಎಂದು ಭಕ್ತರು ದೇವರಲ್ಲಿ ಮೊರೆ ಇಟ್ಟ ಘಟನೆ ಕಳಸೇಶ್ವರ ಸ್ವಾಮಿ ದೇವಾಲಯಲ್ಲಿ ನಡೆದಿದೆ.
ಬೇಸಿಗೆಯಲ್ಲಿ ಮಳೆಗಾಗಿ ಭಕ್ತರು ಕಳಸೇಶ್ವರನನ್ನು ಪ್ರಾರ್ಥನೆ ಮಾಡುವುದು ಅನಾದಿ ಕಾಲದಿಂದ ನಡೆದುಕೊಂಡು ಬಂದ ರೂಢಿ ಆದರೆ ಇಲ್ಲಿ ಪರಿಸ್ಥಿ ಭೀನ್ನವಾಗಿದೆ, ಕಳಸ ತಾಲ್ಲೂಕಿನಲ್ಲಿ ೨೦ ದಿನಗಳಿಂದ ಮಳೆ ಎಡೆಬಿಡದೆ ಸುರಿಯುತ್ತಿದೆ.
ಮಳೆಯ ಆರ್ಭಟದಿಂದ ಜನರು ಹೈರಾಣಾಗಿದ್ದಾರೆ. ತೋಟಗಳಲ್ಲಿ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿದೆ.ಆದ್ದರಿಂದ ಸುರಿಮಳೆಯನ್ನು ನಿಲ್ಲಿಸಿ ಹದವಾದ ಮಳೆ ಕರುಣಿಸುವಂತೆ ಇಲ್ಲಿನ ಊರ ದೇವರಾದ ಕಳಸೇಶ್ವರನಲ್ಲಿ ಭಕ್ತರು ಶುಕ್ರವಾರ ಮೊರೆ ಇಟ್ಟಿದ್ದಾರೆ.
ಅತಿಯಾದ ಮಳೆಯಿಂದ ಜನ, ಜಾನುವಾರುಗಳ ಜೊತೆ ಪ್ರಾಣಿಪಕ್ಷಿಗಳಿಗೂ ಬಾಧೆ ಆಗಿದೆ. ಆದ್ದರಿಂದ ಅತಿವೃಷ್ಟಿ ಆಗದಂತೆ ಹದವಾದ ಮಳೆ ನೀಡು ಎಂದು ಕಳಸೇಶ್ವರ ಸ್ವಾಮಿಗೆ ಅಗ್ನಿ ಸೂಕ್ತ ಮಂತ್ರ ಪಠಿಸಲಾಯಿತು.
ಸಕಲ ಜೀವರಾಶಿಗೂ ಅನುಕೂಲವಾಗುವಂತೆ ಮಳೆ, ಬೆಳೆ ಕರುಣಿಸಬೇಕು ಎಂದು ಕಳಸೇಶ್ವರನಲ್ಲಿ ಪ್ರಾರ್ಥಿಸಲಾಯಿತು.ದೇವಸ್ಥಾನದ ತಂತ್ರಿಗಳು, ಪ್ರಧಾನ ಅರ್ಚಕರು, ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.