ಬೆಂಗಳೂರು: ಕರ್ನಾಟಕಕ್ಕೆ ಸಿಗಬೇಕಾದ ಗೌರವ ಹಾಗೂ ಪಾಲು ಕೇಂದ್ರ ಮರೆತಿರುವುದು ವಿಪರ್ಯಾಸವೇ ಸರಿ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಕೇಂದ್ರದ ಹಣಕಾಸು ಸಚಿವೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ಎರಡನೇ ಬಾರಿ ಕರ್ನಾಟಕದಿಂದ ಆಯ್ಕೆಯಾದರೂ ಕನ್ನಡಿಗರ ಅಭಿವೃದ್ಧಿಗೆ ಯಾವುದೇ ಅನುದಾನ ನೀಡಿಲ್ಲ. ಕರ್ನಾಟಕದ ಆರ್ಥಿಕ ಬೆಳವಣಿಗೆಯನ್ನು ಕುಗ್ಗಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಹಿಂಬಾಗಿಲ ಮೂಲಕ ಮಾಡುತ್ತಿದೆ, ಕೇಂದ್ರ ಬಜೆಟ್‌ನಲ್ಲಿ ಗುಜರಾತ್, ಉತ್ತರಪ್ರದೇಶ ಸೇರಿ ಉತ್ತರಭಾರತದ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ದಕ್ಷಿಣ ಭಾರತದ ರಾಜ್ಯಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಉತ್ತರ ಭಾರತ, ಗುಜರಾತ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ನಮ್ಮ ರಾಜ್ಯಕ್ಕೆ ಅರ್ಹತೆ ಇಲ್ವಾ? ರಾಜ್ಯಕ್ಕೆ ಯೋಜನೆ ಆರ್ಥಿಕ ನೆರವು ಕೊಡುವುದು ಕೇಂದ್ರದ ಕರ್ತವ್ಯ. ಆದರೆ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದಿಂದ 2 ಬಾರಿ ಆಯ್ಕೆ ಆಗಿದ್ದಾರೆ. ರಾಜ್ಯಕ್ಕೆ ಕೊಡಬೇಕಾದ ಗೌರವ ಮರೆತು ತೇಪೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ನಾನು ಹಿಂದೆಯೇ ಹೇಳಿದ್ದೆ ಈಗಲೂ ಹೇಳುತ್ತೇನೆ. ಇದೇ ರೀತಿ ಅನ್ಯಾಯ ಮುಂದುವರಿದರೆ ಮುಂದೆ ವಿಭಜನೆ ಕೂಗು ಏಳಬಹುದು. ತಮಿಳುನಾಡಿನಲ್ಲಿ ಈಗಾಗಲೇ ಶುರುವಾಗಿದೆ, ಕರ್ನಾಟಕಕ್ಕೆ ಸಿಗಬೇಕಾದ ಗೌರವ ಹಾಗೂ ಪಾಲು ಕೇಂದ್ರ ಮರೆತಿರುವುದು ವಿಪರ್ಯಾಸವೇ ಸರಿ ಎಂದರು.