ಸರ್ಕಾರವನ್ನು ಕೆಳಗಿಳಿಸುವುದೆ ಬಿಜೆಪಿಯ ಉದ್ದೇಶ

0
14

ತುಮಕೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕ್ಲೀನ್‌ ಇಮೇಜ್‌ಗೆ ಧಕ್ಕೆ ತರುವ ಯೋಜಿತವಾದ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಮುಡಾದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸೈಟು ಪಡೆದವರೇ ಇಂದು ಆರೋಪ ಮಾಡುತ್ತಿರುವುದು ಸರಿಯಲ್ಲ. ಸಿದ್ದರಾಮಯ್ಯರವರ ಮೇಲೆ ಮಾಡುವ ಆರೋಪ ಅಹಿಂದ ವರ್ಗಗಳ ಮೇಲೆ ಮಾಡುವ ಆರೋಪವಾಗಿದೆ. ಕಾಂಗ್ರೆಸ್‌‍ನಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿಗಳು ಆದಾಗ ಅವರನ್ನು ಕಳಂಕಿತರು ಎಂದು ಹೇಳುವ ಇತಿಹಾಸವನ್ನು ಮುಂದುವರೆದ ಜನಾಂಗದವರು ಮಾಡುತ್ತಿರುವುದು ಹೀನ ಕೃತ್ಯ ಎಂದರು. ಬಿಜೆಪಿಯವರು ಮುಡಾ ಪ್ರಕರಣ ಮುಂದಿಟ್ಟು ಕೊಂಡು ಮೈಸೂರುವರೆಗೆ ರ್ಯಾಲಿ ಮಾಡುತ್ತೇವೆ ಎಂದಿದ್ದಾರೆ. ಅವರು ಪ್ರತಿಭಟನಾ ರ್ಯಾಲಿ ಮಾಡಿದರೆ ನಾವೂ ಸಹ ತುಮಕೂರು ಜಿಲ್ಲೆ ಸೇರಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದರು. ಮುಡಾದಿಂದ ಯಾರು? ಯಾರು? ಸೈಟುಗಳು ತೆಗೆದುಕೊಂಡಿದ್ದಾರೆ ಅವರೆಲ್ಲಾ ವಾಪಸ್ಸು ನೀಡಲಿ, ಅದು ಬಿಟ್ಟು ಒಬ್ಬರ ಮೇಲೆ ಗದಾಪ್ರಹಾರ ನಡೆಸುವುದು ಸರಿಯಲ್ಲ ಎಂದರು. ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರ ಸಂಬಂಧ ಮಾತನಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಈಗಾಗಲೇ ಮೂರು ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿದೆ. ಕೇಂದ್ರ ಸರ್ಕಾರವು ತನಿಖಾ ಸಂಸ್ಥೆ ಗಳನ್ನು ದುರುಪಯೋಗ ಮಾಡಿಕೊಂಡಿದ್ದು ಶೇ 90/ ರಷ್ಟು ಬಿಜೆಪಿಯೇತರರ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದರು. ಬಿಜೆಪಿಯೇತರ ಸರ್ಕಾರವನ್ನು ಕೆಳಗಿಳಿಸುವುದೆ ಬಿಜೆಪಿಯ ಉದ್ದೇಶ. ಜಾರ್ಖಂಡ್‌ ಮತ್ತು ಅರವಿಂದ ಕೇಜ್ರಿವಾಲರ ಮೇಲೆ ನಡೆಯುತ್ತಿರುವುದೆ ಉದಾಹರಣೆಯಾಗಿದೆ ಎಂದರು. ಸಹಕಾರಿ ಚುನಾವಣೆಯಲ್ಲಿ ಸಹ ಸ್ಪರ್ಧೆ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದ ಅವರು, ತಾಲ್ಲೂಕು, ಜಿಲ್ಲಾ, ರಾಜ್ಯ ಸಹಕಾರ ಸಂಘಗಳಲ್ಲಿ ಪ.ಜಾತಿ/ಪ ಪಂಗಡ, ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಸುತ್ತೇವೆ. ನೇಮಕಾತಿಯಲ್ಲಿ ಸಹ ರೋಸ್ಟರ್‌ ಮಾಡಲಾಗುವುದು ಎಂದರು. ಕಾಂಗ್ರೆಸ್‌‍ ಮುಖಂಡ ವೇಣುಗೋಪಾಲ ಮಾತನಾಡಿ, ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವ ವಿಜಯೇಂದ್ರ ಮೊದಲು ಬುದ್ಧಿ ಕಲಿಯಲಿ. ಯಡಿಯೂರಪ್ಪ ಜೈಲಿಗೆ ಹೋಗಲು ಇದೇ ವಿಜಯೇಂದ್ರ ಕಾರಣ ಅಲ್ಲವೇ? ಭೂತದ ಬಾಯಿಂದ ಭಗವದ್ಗೀತೆ ಕೇಳುವ ಅನಿವಾರ್ಯ ನಮಗಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್‌‍ ಮುಖಂಡ ಟಿ.ಪಿ.ಮಂಜುನಾಥ್‌ ಹಾಜರಿದ್ದರು.

Previous articleಪರಿಹಾರಧನಕ್ಕೆ ಜೋಶಿ ಆಗ್ರಹ
Next articleಇಳಕಲ್ ಸೀರೆಯಲ್ಲಿ ರಾಜ್ಯ ನೂತನ ಕಾರ್ಯದರ್ಶಿ