ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ

0
8

ಬೆಂಗಳೂರು: ಸಾರ್ವಜನಿಕರೇ ರಸ್ತೆಗುಂಡಿಗಳ ಫೋಟೋ ತೆಗೆದು ಮಾಹಿತಿ ನೀಡುವ ಆ್ಯಪ್ ಬಿಡುಗಡೆ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಹೇಳಿದ್ದಾರೆ.
ಮುಖ್ಯಮಂತ್ರಿಗಳ ಜೊತೆಗೂಡಿ ಬೆಂಗಳೂರು ಸಿಟಿ ರೌಂಡ್ಸ್‌ ನಡೆಸಿದ ವೇಳೆ ಅನೇಕ ಸಮಸ್ಯೆಗಳು ಕಂಡುಬಂದಿದ್ದು, ಬಿಬಿಎಂಪಿ ವಲಯ ಅಧಿಕಾರಿಗಳು ಸೇರಿದಂತೆ ಬೆಂಗಳೂರಿಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಚರ್ಚೆ ನಡೆಸಲಾಗಿದೆ. ಶುದ್ಧ ಕುಡಿಯುವ ನೀರಿನ ಘಟಕಗಳ ದುರಸ್ಥಿ ಹಾಗೂ ನಗರದ ಎಲ್ಲ ಭಾಗಗಳಲ್ಲಿ ಸರಬರಾಜಾಗುವ ನೀರಿನ ಗುಣಮಟ್ಟದ ಪರೀಕ್ಷೆಯನ್ನು ಬಿಬಿಎಂಪಿ ನಡೆಸಬೇಕು ಹಾಗೂ ಗುಣಮಟ್ಟದ ಫಲಿತಾಂಶವನ್ನು ಬಿಡಬ್ಲ್ಯೂಎಸ್ಎಸ್ಬಿಗೆ ನೀಡಬೇಕು ಎಂದು ಸಭೆಯಲ್ಲಿ ಸೂಚಿಸಿದ್ದಾರೆ, ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಬೆಂಗಳೂರಿನ ಪ್ರಮುಖ ಮೂಲಸೌಕರ್ಯ ಸಮಸ್ಯೆಗಳ ನಿವಾರಣೆಗೆ ಐದು ಅಂಶಗಳ ಕಾರ್ಯಕ್ರಮ ರೂಪಿಸಲಾಗಿದೆ. ಶುದ್ಧ ಕುಡಿಯುವ ನೀರು ಪೂರೈಕೆ, ರಸ್ತೆಗುಂಡಿ ಸಮಸ್ಯೆ ನಿವಾರಣೆ, ಬಿಬಿಎಂಪಿ ಆಸ್ತಿಗಳ ಗುರುತಿಸುವಿಕೆ ಹಾಗೂ ಸಂರಕ್ಷಣೆ, ಆಸ್ತಿ ತೆರಿಗೆ, ರಾಜಕಾಲುವೆ, ಕೆರೆ ಒತ್ತುವರಿ ತೆರವು ಕಾರ್ಯಾಚರಣೆಗಳು ಈ ಐದು ಅಂಶಗಳ ಕಾರ್ಯಕ್ರಮಗಳಲ್ಲಿ ಸೇರಿವೆ.

ರಾಜಕಾಲುವೆ ಒತ್ತುವರಿ ತೆರವಿಗೆ ನ್ಯಾಯಾಲಯ ಈ ಹಿಂದೆ ನಿರ್ದೇಶನ ನೀಡಿತ್ತು. ಅದರಂತೆ 2016-17 ರಲ್ಲಿ 2,626 ಒತ್ತುವರಿಗಳನ್ನು ಗುರುತಿಸಲಾಗಿತ್ತು. 2022- 23 ಹೊತ್ತಿಗೆ 556 ಒತ್ತುವರಿ ತೆರವು ಮಾಡಲಾಗಿತ್ತು. ಈಗ 1136 ಹೊಸ ಒತ್ತುವರಿಗಳನ್ನು ಗುರುತಿಸಲಾಗಿದ್ದು, ಒಟ್ಟು 4,316 ಒತ್ತುವರಿಗಳನ್ನು ಗುರುತಿಸಲಾಗಿದೆ. ಸ್ಯಾಟಲೈಟ್, ಗೂಗಲ್ ಇಮೇಜ್ ಮತ್ತು ಸರ್ವೇ ಇಲಾಖೆ ಈ ಒತ್ತುವರಿ ಮಾಹಿತಿ ಸಂಗ್ರಹಿಸಿದೆ. ಒತ್ತುವರಿ ತೆರವುಗೊಳಿಸಲು ಬಿಎಂಟಿಎಫ್ ಗೆ ಕಾನೂನಾತ್ಮಕವಾಗಿ ಮತ್ತು ಎಲ್ಲಾ ರೀತಿಯ ಬೆಂಬಲ ನೀಡಬೇಕು ಎಂದು ಮಾರ್ಗದರ್ಶನ ನೀಡಲಾಗಿದೆ.

ಬಾಗಿಲಿಗೆ ಬಂತು ಸರ್ಕಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಒತ್ತುವರಿ ವಿಚಾರವಾಗಿ ಬಂದಿರುವ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದ್ದೇನೆ.ನಗರದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ರಸ್ತೆ ಗುಂಡಿಗಳಿರುವ ಬಗ್ಗೆ ಮಾಹಿತಿ ಬಂದಿದ್ದು, ಸಾರ್ವಜನಿಕರೇ ರಸ್ತೆಗುಂಡಿಗಳ ಫೋಟೋ ತೆಗೆದು ಮಾಹಿತಿ ನೀಡುವ ಆ್ಯಪ್ ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

Previous articleಕ್ರಿಕೆಟ್ ಜಗಳ: ಗುಂಪು ಘರ್ಷಣೆ
Next articleಸರ್ಕಾರ ರಾಜ್ಯವನ್ನು ಉಡ್ತಾ ಕರ್ನಾಟಕ ಮಾಡುತ್ತಿದೆ