ನೇಮಕಾತಿ ವಿಳಂಬಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ

0
16

ಬೆಂಗಳೂರು: ನೇಮಕಾತಿಯನ್ನೇ ವಿಳಂಬಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಗುಟ್ಟೇನಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸರಣಿ ಪೋಸ್ಟ್‌ ಮಾಡಿರುವ ಅವರು ಕರ್ನಾಟಕ ಲೋಕ ಸೇವಾ ಆಯೋಗದಲ್ಲಿ ಆಗುತ್ತಿದ್ದ ಅನ್ಯಾಯದ ವಿರುದ್ಧ, ಭ್ರಷ್ಟಾಚಾರ, ಸ್ವಜನಪಕ್ಷಪಾತದ ವಿರುದ್ಧ ಗಟ್ಟಿ ಧ್ವನಿಯಾಗಿದ್ದ ದಕ್ಷ IAS ಅಧಿಕಾರಿ ಕೆ.ಎಸ್. ಲತಾ ಕುಮಾರಿ ಅವರಿಗೆ ಕಡ್ಡಾಯವಾಗಿ ರಜೆ ಕೊಟ್ಟು ಕಳಿಸಿ, ಆಯೋಗದಲ್ಲಿ ನಡೆಯುವ ‘ಆಂತರಿಕ’ ಕೆಲಸಗಳಿಗೆ ಸರ್ಕಾರ ಕೆಂಪುಹಾಸು ಹಾಕಿಕೊಡುವ ಮೂಲಕ ಭ್ರಷ್ಟಾಚಾರವನ್ನು, ‘ಕೊಡುವುದು-ತೆಗೆದುಕೊಳ್ಳುವುದನ್ನು’ ಕಾನೂನುಬದ್ಧಗೊಳಿಸುವ ಮಹತ್ಕಾರ್ಯವನ್ನು ಮಾಡಿದೆ. Meritocracy ಗೆ ಮಾನ್ಯತೆ ನೀಡಿ ಪ್ರತಿಭಾನ್ವಿತ, ಬಡ ಅಭ್ಯರ್ಥಿಗಳ ಪರ ಕೆಲಸ ಮಾಡಬೇಕಾಗಿದ್ದ ಆಯೋಗ, ಕರ್ನಾಟಕ ‘ಪೊಲಿಟಿಕಲ್’ ಸರ್ವಿಸ್ ಕಮೀಷನ್ ಆಗಿದೆ. ಪ್ರತಿಯೊಂದು ಹುದ್ದೆಗಳಿಗೆ ‘ದರ’ ನಿಗದಿ ಮಾಡಿ ಬಿಕರಿ ಮಾಡಿ, ಕಲೆಕ್ಷನ್ ಆಗದಿದ್ದರೆ, ನೇಮಕಾತಿಯನ್ನೇ ವಿಳಂಬಗೊಳಿಸಿ ಅರ್ಹ ಅಭ್ಯರ್ಥಿಗಳಿಗೆ ಅನ್ಯಾಯ ಮಾಡುತ್ತಿರುವುದು ಗುಟ್ಟೇನಲ್ಲ. ಆಯೋಗದ ಅಧ್ಯಕ್ಷರನ್ನು ಕಿತ್ತೆಸೆದು ನ್ಯಾಯ ದೊರಕಿಸಿಕೊಡಬೇಕಾಗಿದ್ದ ಸರ್ಕಾರ, ಭ್ರಷ್ಟರ ಒತ್ತಡಕ್ಕೆ ಮಣಿದು, ಅಭ್ಯರ್ಥಿಗಳ ಪರವಿದ್ದ ಆಯೋಗದ ಕಾರ್ಯದರ್ಶಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವುದು ಇವರ ದುರಾಡಳಿತಕ್ಕೆ, ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿ, ದಕ್ಷ ಅಧಿಕಾರಿ ಶ್ರೀಮತಿ ಕೆ.ಎಸ್.ಲತಾ ಕುಮಾರಿ ಅವರನ್ನು ಬಿಟ್ಟು, ಆಯೋಗದಲ್ಲಿರುವ ಆಯಕಟ್ಟಿನ ಸ್ಥಾನದ ಎಲ್ಲಾ ಅಧಿಕಾರಿಗಳನ್ನು ಈ ಕೂಡಲೇ ವರ್ಗಾವಣೆ ಮಾಡಿ. ಯಾವುದೇ ಒತ್ತಡಕ್ಕೆ ಮಣಿಯದ, ನಿಷ್ಪಕ್ಷಪಾತವಾದ, ‘ರಾಜಕೀಯ ನೆಂಟಸ್ತನ’ ವಿಲ್ಲದ, ಶುದ್ಧಹಸ್ತದ ಅಧಿಕಾರಿಗಳನ್ನು ಈ ಕೂಡಲೇ ನೇಮಕ ಮಾಡಬೇಕೆಂದು ಆಗ್ರಹಿಸುತ್ತೇನೆ. ಈಗಾಗಲೇ, ಸಾಕಷ್ಟು ನೊಂದಿರುವ ಅಭ್ಯರ್ಥಿಗಳು ಹಾಗೂ ಅವರ ಪೋಷಕರ ಪರ ನನ್ನ ಬೆಂಬಲ, ಸಹಕಾರ ಖಂಡಿತ ಇರುತ್ತದೆ ಎಂದು ಬರೆದುಕೊಂಡಿದ್ದಾರೆ.

Previous articleಖರ್ಗೆ ಆ ಹಾಡನ್ನು ಕೇಳಿರಬೇಕು: ಮೋದಿ
Next articleವೀರನಗೌಡರ ಮನೆ ಮೇಲೆ ಐಟಿ ದಾಳಿ