ಭಕ್ತರ ಜಯಘೋಷಗಳ ಮಧ್ಯ ವಿಜಯ ಮಹಾಂತೇಶ ರಥೋತ್ಸವ

0
7

ಇಳಕಲ್: ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದ ವಿರಕ್ತಮಠವಾದ ವಿಜಯ ಮಹಾಂತೇಶ ಪೀಠದ ರಥೋತ್ಸವ ಸೋಮವಾರದಂದು ಸಂಜೆ7 ಗಂಟೆಗೆ ಭಕ್ತರ ಜಯಘೋಷದ ಮಧ್ಯ ನಡೆಯಿತು. ಮಧ್ಯಾಹ್ನ ಮೂರು ಗಂಟೆಗೆ ಶ್ರೀಮಠದಿಂದ ಪಲ್ಲಕ್ಕಿ ಉತ್ಸವ ಆರಂಭವಾಗಿ ಅದು ಬಸವನಗುಡಿ, ಶ್ರೀರಾಮ ಮಂದಿರ, ಕೊಪ್ಪರದ ಪೇಟೆಯ ಬನಶಂಕರಿ ದೇವಸ್ಥಾನ, ಪಶು ಚಿಕಿತ್ಸಾಲಯ , ಸಿಂಗದವರ ಓಣಿ , ಡಮಾಮ ಗಿರಣಿ , ಮನ್ನಾಪೂರರ ಮನೆ , ಸರಕಾರಿ ಪ್ರಾಥಮಿಕ ಶಾಲೆ ನಂ ೭ ರ ಮಾರ್ಗವಾಗಿ ಗದ್ದುಗೆಯನ್ನು ತಲುಪಿ ಅಲ್ಲಿ ಐದು ಸುತ್ತು ಹಾಕಿ ನಂತರ ಪಾದಗಟ್ಟೆಗೆ ಮುಟ್ಟಿ ಅಲ್ಲಿಂದ ಮರಳಿದ ನಂತರ ತುಂಬಿದ ರಥವನ್ನು ಭಕ್ತರು ಎಳೆದರು.
ಕಳೆದ ಎರಡು ದಿನಗಳಿಂದ ರಥವನ್ನು ನಾರಾಯಣಪ್ಪ ಬಡಿಗೇರ ಪರಿವಾರದವರು ಶೃಂಗಾರ ಮಾಡಲು ತೊಡಗಿದ್ದರು ಹೂವಿನ ಅಲಂಕಾರ ಮಾಡಿ ಅತ್ಯಂತ ಸುಂದರವಾಗಿ ರಥ ಕಾಣುವಂತೆ ಮಾಡಿ ಅದರ ಮೇಲೆ ಕಳಸವನ್ನು ಇಡಲಾಗಿತ್ತು ವಾಡಿಕೆಯಂತೆ ರಥೋತ್ಸವ ಮತ್ತು ಅಡ್ಡಪಲ್ಲಕ್ಕಿ ಉತ್ಸವ ಸಮಯದಲ್ಲಿ ಮಳೆ ಬರುತ್ತದೆ ಎಂಬ ಮಾತು ಇರುವ ಪ್ರಕಾರ ಸಂಜೆ ನಾಲ್ಕು ಗಂಟೆಯ ಸುಮಾರಿಗೆ ಮಳೆಯ ಹನಿಗಳು ಸುರಿದರೂ ರಥ ಎಳೆಯುವ ಸಮಯದಲ್ಲಿ ಮಳೆ ಬಾರದೇ ಸರಳವಾಗಿ ತೇರನ್ನು ಭಕ್ತರು ಮಹಾಂತನ ಜಯಘೋಷದೊಂದಿಗೆ ಎಳೆದರು. ಬೇರೆಬೇರೆ ಕಡೆಯಿಂದ ಸಾವಿರಾರು ಜನ ತಂಡೋಪತಂಡವಾಗಿ ವಿಜಯ ಮಹಾಂತೇಶ ಗದ್ದುಗೆಯತ್ತ ಸೇರಿದ್ದರು ಸುಮಾರು ೫೦ ರಿಂದ ೬೦ ಸಾವಿರ ಜನರು ವಿಜಯ ಮಹಾಂತನ ರಥೋತ್ಸವಕ್ಕೆ ಸಾಕ್ಷಿಯಾದರು. ಗುರುಮಹಾಂತಶ್ರೀಗಳು ಸೇರಿದಂತೆ ನಾಡಿನ ನಾನಾ ಸ್ವಾಮಿಗಳು ಭಕ್ತಿಭಾವದಿಂದ ಇದರಲ್ಲಿ ಪಾಲ್ಗೊಂಡಿದ್ದರು. ರಥವನ್ನು ಎಳೆಯುತ್ತಿದ್ದ ಹಾಗೆಯೇ ಆಗಸದಲ್ಲಿ ಪಟಾಕಿಗಳು ಸಿಡಿದು ಗದ್ದುಗೆಯ ಸ್ಥಳ ಹೂಬಾಣಗಳ ಅಲಂಕಾರದಿಂದ ಸುಂದರವಾಗಿ ಕಂಗೊಳಿಸಿತು ಅದಕ್ಕೆ ಮೋಡ ಕವಿದ ವಾತಾವರಣ ಸಹ ಪೂರಕವಾಗಿತ್ತು.

Previous articleಹರಿಪ್ರಸಾದ್ ಹೇಳಿಕೆಯಿಂದ ಅವರಿಗೇ ಹಾನಿ
Next articleದೇಶದ ಉದ್ದಗಲಕ್ಕೂ ‘ಹಸ್ತವ್ಯಸ್ತ’ವಾಗಿದೆ