ನೀರು ನಿಲ್ಲಿಸಿದರೆ ಶಾಂತಿ ನೀರು ಬಿಟ್ಟರೆ ಕ್ರಾಂತಿ

0
20

ಮಂಡ್ಯ: ಕಾವೇರಿ ಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ದ್ರೋಹ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಂಡ್ಯದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಂಗಳೂರಿನಿಂದ ಕೆ ಆರ್ ಎಸ್ ಮುತ್ತಿಗೆಗೆ ತೆರಳುತ್ತಿದ್ದ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ರಸ್ತೆ ತಡೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ಧ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ರಕ್ತ ಚೆಲ್ಲುತ್ತೇವೆ ಕಾವೇರಿ ಉಳಿಸುತ್ತೇವೆ, ನೀರು ನಿಲ್ಲಿಸಿದರೆ ಶಾಂತಿ ನೀರು ಬಿಟ್ಟರೆ ಕ್ರಾಂತಿ ಎಂಬ ಘೋಷಣೆ ಮೊಳಗಿಸಿದರು.
ಕೆ ಆರ್ ಎಸ್ ಜಲಾಶಯದಿಂದ ರಾತ್ರೋರಾತ್ರಿ ನೀರು ಬಿಡುವ ಮೂಲಕ ರೈತ ವಿರೋಧಿ ಯಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರೈತರಿಗೆ ಮರಣ ಶಾಸನ ಬರೆದಿದೆ, ಕಾವೇರಿ ಕೊಳ್ಳದ ಜಲಾಶಯ ಭರ್ತಿಯಾಗಿಲ್ಲ, ಇಲ್ಲಿನ ರೈತರು ಬೆಳೆದಿರುವ ಬೆಳೆ ರಕ್ಷಣೆಗೆ ನೀರು ಸಾಕಾಗುತ್ತಿಲ್ಲ,ಹೊಸ ಬೆಳೆ ನಾಟಿ ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಿದೆ, ಇಂತಹ ಸಂದರ್ಭದಲ್ಲಿ ಸತತವಾಗಿ ತಮಿಳುನಾಡಿಗೆ ನೀರು ಹರಿಸಿ ಜಲಾಶಯಗಳನ್ನ ಬರಿದು ಮಾಡಿದೆ ಎಂದು ಹೇಳಿದರು.
ಕಾವೇರಿ ನೀರು ಪ್ರಾಧಿಕಾರ ನೀರು ಬಿಡುವಂತೆ ಯಾವುದೇ ಆದೇಶ ಮಾಡಿರದಿದ್ದರೂ ರಾಜಕೀಯ ಉದ್ದೇಶದಿಂದ ತಮಿಳುನಾಡು ಒಲೈಸಿಕೊಳ್ಳಲು ನೀರು ಬಿಟ್ಟಿರುವ ಸರ್ಕಾರಕ್ಕೆ ಕನ್ನಡ ನಾಡಿನ ರೈತರ ಬಗ್ಗೆ ಅಭಿಮಾನ ಇಲ್ಲವಾಗಿದೆ ಎಂದರು.
ರೈತರು ಬೇಕಾದರೆ ನ್ಯಾಯಾಲಕ್ಕೆ ಹೋಗಲಿ ಎಂದು ಉಡಾಫೆಯಾಗೆ ವರ್ತಿಸಿರುವ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗೆ ಆಡಳಿತದ ಜ್ಞಾನ ಇದೆಯಾ, ಕಾವೇರಿ ವಿಚಾರದಲ್ಲಿ ರೈತರು ಸಾಕಷ್ಟು ಹೋರಾಟ ಮಾಡಿದ್ದಾರೆ,ರೈತರೇ ಎಲ್ಲವನ್ನು ಮಾಡುವುದಾದರೆ ನಿಮ್ಮ ಸರ್ಕಾರ ಏಕೆ ಇರಬೇಕು, ಸರ್ಕಾರದ ಕೆಲಸ ಏನು ಎಂದು ಪ್ರಶ್ನಿಸಿದ ಪ್ರತಿಭಟನಾಕಾರರು ಕೂಡಲೇ ರೈತರ ಕ್ಷಮೆಯಾಚಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡಿಗರ ಬಗ್ಗೆ ಅಭಿಮಾನ ಇಲ್ಲ, ಮತ ಹಾಕಿದ ಮತದಾರರ ಬಗ್ಗೆಯೂ ಅಸಡ್ಡೆತನ ತೋರಿದೆ,ಮೇಕೆದಾಟು ವಿಚಾರವಾಗಿ ಪಾದಯಾತ್ರೆ ಮಾಡಿದವರು ಇದೀಗ ರೈತರಿಗೆ ದ್ರೋಹ ಮಾಡುವ ಕೆಲಸ ಮಾಡಿದ್ದಾರೆ, ಇದೇ ರೀತಿ ಕನ್ನಡಿಗರ ವಿರೋಧಿ ನೀತಿ ಮುಂದುವರೆಸಿದರೆ ಮುಂದಿನ ದಿನಗಳಲ್ಲಿ ಸರ್ಕಾರವನ್ನು ಕಿತ್ತೊಗಿಯುವ ಜನಜಾಗೃತಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಕನ್ನಡಪರ ಸಂಘಟನೆಗಳ ರಾಜ್ಯ ಮುಖಂಡರಾದ ನೀಲೇಶ್ ಗೌಡ, ಲೋಕೇಶ್ ಗೌಡ, ಪ್ರಕಾಶ್ ಗೌಡ, ರಮೇಶ್, ಕೃಷ್ಣೇಗೌಡ, ಎಂ ಬಿ ನಾಗಣ್ಣಗೌಡ ನೇತೃತ್ವ ವಹಿಸಿದ್ದರು.

Previous article‘ನವೀನ ಕಲ್ಪನೆ ಪ್ರಶಸ್ತಿ’ ವಿಭಾಗದಲ್ಲಿ ಹುಬ್ಬಳ್ಳಿ ಸ್ಮಾರ್ಟ್ ಸಿಟಿಗೆ ಪ್ರಥಮ ಸ್ಥಾನ
Next articleವಿವಿಧ ಕನ್ನಡಪರ ಸಂಘಟನೆಗಳಿಂದ ಕನ್ನಂಬಾಡಿ ಅಣೆಕಟ್ಟೆ ಮುತ್ತಿಗೆ ಯತ್ನ-ಹೋರಾಟಗಾರರ‌ ಬಂಧನ