ಬಾಗಲಕೋಟೆ: ನವನಗರದ ಅನುಷ್ ಪೆಟ್ರೋಲ್ ಬಂಕ್ ಬಳಿಯಲ್ಲಿ ಗುರುತಿಸಲಾಗಿದ್ದ ಜಾಗೆಯಲ್ಲಿ ರಾತೋ ರಾತ್ರಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆಗೊಂಡಿದೆ.
ಬೃಹದಾಕಾರದ ಶಿವಾಜಿ ಪ್ರತಿಮೆ ಅನಾವರಣಕ್ಕೆ ಈ ಮೊದಲೇ ನಿಶ್ಚಿಯಿಸಲಾಗಿತ್ತು ಆದರೆ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂಬ ಅರೋಪ ಕೇಳಿ ಬಂದು ಈ ವಿಚಾರ ವಿವಾದಕ್ಕೆ ತುತ್ತಾಗಿತ್ತು.
ಇದೀಗ ರವಿವಾರ ರಾತ್ರಿ ಬೃಹದಾಕಾತದ ಶಿವಾಜಿ ಮೂರ್ತಿ ಪ್ರತಿಷ್ಠಾಪನೆಗೊಳ್ಳಬೇಕಿದ್ದ ಜಾಗೆಯಲ್ಲಿ ಯಾರೋ ಚಿಕ್ಕದಾದ ಮತ್ತೊಂದು ಶಿವಾಜಿ ಪ್ರತಿಮೆಯನ್ನು ತಂದು ಅನಾವರಣಗೊಳಿಸಿರುವುದು ಕಂಡು ಬಂದಿದೆ.
ವಿಷಯ ತಿಳಿದು ಮಾಜಿ ಎಂಎಲ್ಸಿ ನಾರಾಯಣಸಾ ಭಾಂಡಗೆ ನೇತೃತ್ವದಲ್ಲಿ ಮರಾಠ ಸಮಾಜದ ಮುಖಂಡರು ಸ್ಥಳಕ್ಕೆ ತೆರಳಿ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜತೆಗೆ ಮಾತನಾಡಿದ ನಾರಾಯಣಸಾ ಭಾಂಡಗೆ, ಶಿವಾಜಿ ಪ್ರತಿಮೆ ಅನಾವರಣಕ್ಕಾಗಿಯೇ ಜಾಗೆಯನ್ನು ಗುರುತಿಸಲಾಗಿತ್ತು, ಈಗ ಏಕಾಏಕಿ ಪ್ರತಿಮೆ ಅನಾವರಣಗೊಂಡಿದೆ. ಇದು ಹಿಂದೂ ಹೃದಯ ಸಾಮ್ರಾಟ್ ಶಿವಾಜಿ ಮಹಾರಾಜರಿಗೆ ಯಾರೋ ಅಭಿಮಾನಿಗಳೇ ಗೌರವ ಸಲ್ಲಿಸಿದ್ದಾರೆ. ಇದೇ ಜಾಗೆಯಲ್ಲಿ ಮುಂದೆ ಬೃಹತ್ ಪ್ರತಿಮೆಯೂ ಅನಾವರಣ ಆಗಲಿದೆ ಎಂದರು.
ಸಮಾಜದ ಮುಖಂಡರಾದ ಮಾರುತಿ ಶಿಂಧೆ, ರಾಜು ವಾಘ, ಭೀಮಶಿ ಮೋರೆ, ಮಾರುತಿ ನಾಲವಡೆ, ಬಿಜೆಪಿ ಮುಖಂಡ ರಾಜು ರೇವಣಕರ ಇತರರು ಇದ್ದರು.