ರಾಜ್ಯದಲ್ಲಿ ೧೦ ಕೆಜಿ ಉಚಿತ ಅಕ್ಕಿ ವಿತರಣೆ ಪಕ್ಷ ರಾಜಕಾರಣಕ್ಕೆ ವಸ್ತುವಾಗಿದೆ. ಆಡಳಿತ ಮತ್ತು ಪ್ರತಿಪಕ್ಷದವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ಇದರಿಂದ ಕಡು ಬಡವರಿಗೆ ಉಪಯೋಗವೇನೂ ಆಗುವುದಿಲ್ಲ. ಕರ್ನಾಟಕ ಮೊದಲಿನಿಂದಲೂ ಜನಪರ ಸಮಸ್ಯೆಗಳು ಬಂದಾಗ ಸರ್ವ ಪಕ್ಷಗಳ ಸಭೆ ನಡೆಸಿ ಒಮ್ಮತ ತೀರ್ಮಾನ ಕೈಗೊಳ್ಳುತ್ತ ಬಂದಿದೆ. ಈಗಲೂ ಅದೇ ಮಾರ್ಗ ಸೂಕ್ತ. ಬೀದಿಯಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡುವ ಬದಲು ಜನರಿಗೆ ೧೦ ಕೆಜಿ ಉಚಿತವಾಗಿ ನೀಡಲು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಚಿಂತಿಸಬೇಕು. ವಿಧಾನಸೌಧದಲ್ಲಿ ಸರ್ವ ಪಕ್ಷಗಳ ಸಭೆ ನಡೆಸಿ ಸರ್ವ ಸಮ್ಮತ ತೀರ್ಮಾನಕ್ಕೆ ಬಂದು ಅದರ ಬಗ್ಗೆ ವಿಧಾನಮಂಡಲದಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ಅದರಂತೆ ನಡೆಯುವುದು ಸೂಕ್ತ. ಚುನಾವಣೆಗೆ ಮುನ್ನ ಇದು ಒಂದು ರಾಜಕೀಯ ಪಕ್ಷದ ಚುನಾವಣೆ ಗ್ಯಾರಂಟಿ ಘೋಷಣೆ ಆಗಿರಬಹುದು. ಆದರೆ ಈಗ ಅದು ಸರ್ಕಾರಿ ಕಾರ್ಯಕ್ರಮ. ಜನಪರ ತೀರ್ಮಾನ ಕೈಗೊಂಡಾಗ ಎಲ್ಲ ರಾಜಕೀಯ ಪಕ್ಷಗಳು ಪಕ್ಷಬೇಧ ಮರೆತು ಕೈಜೋಡಿಸುವುದು ಸೂಕ್ತ. ನಿಜವಾದ ಪ್ರಜಾಪ್ರಭುತ್ವದ ತಿರುಳು ಇದೇ ಆಗಿದೆ. ಈಗಲೂ ಕಾಲ ಮಿಂಚಿಲ್ಲ. ಬೀದಿ ಹೋರಾಟ ನಿಲ್ಲಿಸಿ ಎಲ್ಲ ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳು ವಿಧಾನಸೌಧದಲ್ಲಿ ಕುಳಿತು ತೀರ್ಮಾನ ಕೈಗೊಳ್ಳಲಿ. ಸವಾಲು- ಪ್ರತಿ ಸವಾಲು ಹಾಗೂ ಆರೋಪ-ಪ್ರತಿ ಆರೋಪಗಳಲ್ಲಿ ಕಾಲಹರಣ ಮಾಡುವುದು ಸರಿಯಲ್ಲ. ಕಡು ಬಡವರಿಗೆ ಅಕ್ಕಿ ಬೇಕೇ ಹೊರತು ಯಾರು ಕೊಟ್ಟರು ಎಂಬುದು ಮುಖ್ಯವಲ್ಲ. ಜನಪ್ರತಿನಿಧಿಗಳು ಜನಸೇವಕರು ಎಂದು ಚುನಾವಣೆ ಕಾಲದಲ್ಲಿ ಹೇಳುತ್ತಾರೆ. ಅಧಿಕಾರಕ್ಕೆ ಬಂದ ಕೂಡಲೇ ರಾಜ ಮಹಾರಾಜರಾಗಿ ಬಿಡುತ್ತಾರೆ. ಮತದಾರ ಪ್ರಭುವಾಗಿ ಮತ ಚಲಾಯಿಸಿ ಮೂಲೆ ಸೇರಿದ್ದಾನೆ. ಎಲ್ಲ ರಾಜಕೀಯ ಪಕ್ಷಗಳ ಮೇಲಾಟ ನೋಡುತ್ತ ಮತ್ತೆ ೫ ವರ್ಷದ ಮತ ಚಲಾವಣೆಯ ಅಧಿಕಾರಕ್ಕೆ ಕಾಯುತ್ತ ಕೂಡಬೇಕಾದ ಪರಿಸ್ಥಿತಿ ಬಂದಿದೆ.
ಕರ್ನಾಟಕದಲ್ಲಿ ಕಾವೇರಿ, ಕೃಷ್ಣಾ, ಮಹದಾಯಿ, ಮೇಕೆದಾಟು ಸೇರಿದಂತೆ ಎಲ್ಲ ಜಲ ವಿವಾದಗಳಲ್ಲಿ ಸರ್ವಪಕ್ಷಗಳು ಒಮ್ಮತ ತೀರ್ಮಾನ ಕೈಗೊಳ್ಳುತ್ತ ಬಂದಿದೆ. ಇದರಿಂದ ಸರ್ಕಾರದೊಂದಿಗೆ ಪ್ರತಿಪಕ್ಷಗಳು ಕೈಜೋಡಿಸಲು ಸಾಧ್ಯವಾಗಿದೆ. ಅದೇರೀತಿ ಗಡಿ ವಿಚಾರದಲ್ಲಿ ಎಂದೂ ಒಡಕು ಧ್ವನಿ ಕೇಳಿಬಂದಿಲ್ಲ. ಹೀಗಿರುವಾಗ ಅನ್ನದ ಪ್ರಶ್ನೆ ಬಂದಾಗ ಒಡಕು ಮಾತು ಬರಬಾರದು. ಜನಪ್ರತಿನಿಧಿಗಳು ವಿವೇಕ ಕಳೆದುಕೊಂಡಾಗ ಎಚ್ಚರಿಸುವುದು ಸಮಾಜದ ಕೆಲಸ. ಜನರಿಗೆ ಒಳಿತಾಗುವ ಕೆಲಸವನ್ನು ಎಲ್ಲರೂ ಒಗ್ಗೂಡಿ ಕೈಗೊಂಡಾಗ ಎಲ್ಲರಿಗೂ ಸಂತಸ ತರುತ್ತದೆ. ಬಡತನ ನಿವಾರಣೆ ಒಂದು ರಾಜಕೀಯ ಪಕ್ಷದಿಂದ ಆಗುವ ಕೆಲಸವಲ್ಲ. ಅದೇರೀತಿ ನಿರುದ್ಯೋಗ ಕೂಡ ದೊಡ್ಡ ಸಮಸ್ಯೆ. ಚುನಾವಣೆ ಕಾಲದಲ್ಲಿ ಒಂದು ರಾಜಕೀಯ ಪಕ್ಷ ಭರವಸೆ ಕೈಗೊಂಡಿತು ಎಂಬ ಏಕೈಕ ಕಾರಣದಿಂದ ಎಲ್ಲವನ್ನೂ ಆ ರಾಜಕೀಯ ಪಕ್ಷದ ಮೇಲೆ ಹಾಕಿ ಬಡತನ ನಿವಾರಣೆ ಕಾರ್ಯಕ್ರಮ ಸುಲಭವಾಗಿ ಜಾರಿಗೆ ಬಾರದಂತೆ ಅಡ್ಡಿ ಪಡಿಸುವುದು ಜನದ್ರೋಹದ ಕೆಲಸ. ಈಗ ಈ ಕಾರ್ಯಕ್ರಮಕ್ಕೆ ಜನಾದೇಶದ ಮೊಹರು ಬಿದ್ದಿದೆ ಎಂಬುದನ್ನು ಮರೆಯಬಾರದು. ಹಸಿದ ಜೀವ ಅನ್ನಕ್ಕೆ ಕೈ ಚಾಚಿದಾಗ ಅದು ಯಾವ ಕೈ ಎಂದು ನೋಡುವುದು ಅಮಾನವೀಯ. ಕೊಡುವ ಕೈ ಎಂದೂ ಮೇಲಿರುತ್ತದೆ. ಅದರಲ್ಲಿ ಭಾಗಿಯಾಗಬೇಕೆ ಹೊರತು ಅನ್ನ ಕಸಿದುಕೊಳ್ಳುವ ಕೆಲಸ ಮಾಡಬಾರದು. ಅದೇರೀತಿ ಅನ್ನ ಕೊಡುವ ಕೈಗಳಿಗೆ ದುರಂಹಕಾರ ಬರಬಾರದು. ಹಿಂದಿನಿಂದಲೂ ನಮ್ಮಲ್ಲಿ ಅನ್ನ ಕೊಡುವುದು ಸತ್ಕಾರ್ಯ ಎಂದು ತಿಳಿದಿದ್ದೇವೆ. ಅದರಲ್ಲಿ ಈ ಅಗುಳು ನಮ್ಮದು ಎಂದು ಎಣಿಸುವುದು ಹೀನ ಕೃತ್ಯ. ಆಹಾರ ಪಡೆಯುವುದು ಮೂಲಭೂತ ಹಕ್ಕು ಎಂದು ಸಂವಿಧಾನದಲ್ಲಿ ಹೇಳಿರುವ ಮೂಲ ಉದ್ದೇಶ ಹಸಿವಿನಿಂದ ಯಾರೂ ಸಾಯಬಾರದು. ಈಗ ನಡೆಯುತ್ತಿರುವ ಕ್ಷುಲ್ಲಕ ವಾದ- ವಿವಾದವನ್ನು ನೋಡಿದರೆ ಕಡು ಬಡವರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಅಲ್ಲದೆ ಹಸಿದವರು ಈ ರಾಜಕೀಯ ಮೇಲಾಟವನ್ನು ನೋಡಿ ತಮಗೆ ಉಚಿತ ಅಕ್ಕಿ ಬೇಡವೇ ಬೇಡ ಎಂದು ಬೇಸರದಿಂದ ಹೇಳಿದರೆ ಆಶ್ಚರ್ಯವೇನೂ ಇಲ್ಲ. ಇಂಥ ಪರಿಸ್ಥಿತಿಗೆ ಈಗಲೇ ಕೊನೆ ಹಾಡಬೇಕು. ಜನ ಯಾರೂ ಬಡತವನ್ನು ಬಯಸಿ ಪಡೆದುಕೊಂಡಿರುವುದಿಲ್ಲ. ಅವರನ್ನು ಬಡತನದಿಂದ ಮೇಲಕ್ಕೆ ಎತ್ತುವುದೇ ಪ್ರಜಾಪ್ರಭುತ್ವದ ಮೂಲ ಉದ್ದೇಶ. ಕಟ್ಟಕಡೆಯ ಮನುಷ್ಯನಿಗೆ ಮೊತ್ತ ಮೊದಲ ಅವಕಾಶ ಎಂದು ಹೇಳುತ್ತೇವೆ. ಆದರೆ ಹಲವು ರಾಜಕೀಯ ಪಕ್ಷಗಳ ಮೇಲಾಟದಲ್ಲಿ ಕಟ್ಟಕಡೆಯ ಮನುಷ್ಯ ಇನ್ನೂ ಕನಿಷ್ಠ ವ್ಯಕ್ತಿಯಾಗಿ ಹೋಗುತ್ತಿದ್ದಾನೆ. ಕೇಂದ್ರ ಕೂಡ ಈ ವಿಷಯದಲ್ಲಿ ಉದಾರ ನಿಲುವು ತಳೆಯುವ ಅಗತ್ಯವಿದೆ. ಎಲ್ಲ ರಾಜ್ಯಗಳನ್ನೂ ಏಕರೂಪವಾಗಿ ಕಾಣುವುದು ಒಂದು ಕಡೆ, ಮಾನವೀಯತೆ ಮತ್ತೊಂದು ಕಡೆ. ಪ್ರಜಾಪ್ರಭುತ್ವದ ಸಾರ್ಥಕತೆ ಇರುವುದೇ ಮಾನವೀಯತೆಯಲ್ಲಿ. ಹಿಂದೆ ದೇಶಾದ್ಯಂತ `ಸ್ವಾತಂತ್ರ್ಯ ಮತ್ತು ಅನ್ನ’ ವಿಷಯ ಬಂದ ಕೆಲವರು ಸ್ವಾತಂತ್ರö್ಯದ ಪರ ಮತ್ತೆ ಕೆಲವರು ಅನ್ನದ ಪರವಾಗಿ ನಿಂತರು. ಅನ್ನದ ಸಿಗದಿದ್ದಾಗ ಮನುಷ್ಯತ್ವವೇ ಉಳಿಯುವುದಿಲ್ಲ ಎಂಬುದು ಇತಿಹಾಸ ತಿಳಿಸಿಕೊಟ್ಟಿದೆ. ಅ ದಿನಗಳು ಮತ್ತೆ ಬರಬಾರದು.