ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆದೇಶದ ಮೇರೆಗೆ ನಗರದಲ್ಲಿ ಇಂದಿನಿಂದ ರಾಜಕಾಲುವ ಒತ್ತುವರಿ ತೆರವು ಕಾರ್ಯಚರಣೆ ಶುರುವಾಗಿದೆ. ಅತಿ ಹೆಚ್ಚು ಒತ್ತುವರಿ ಆಗಿದೆ ಎನ್ನಲಾದ ಮಹದೇವಪುರ ಹಾಗೂ ಕೆ ಆರ್ ಪುರಂಗಳಲ್ಲಿ ಇಂದಿನಿಂದ ಒತ್ತುವರಿ ತೆರವು ಕಾರ್ಯಚರಣೆ ಆರಂಭವಾಗಿತ್ತು. ಸರ್ಕಾರದಿಂದ ತೆರವು ಕಾರ್ಯಾಚರಣೆಗೆ ಒತ್ತಡ ಬಂದ ಹಿನ್ನೆಲೆಯಲ್ಲಿ ಜೆಸಿಬಿ, ಹಿಟಾಚಿ ಸೇರಿ ಸಿಬ್ಬಂದಿಯೊಂದಿಗೆ ತೆರವು ಕಾರ್ಯಾಚರಣೆಗೆ ಹೋದ ಬಿಬಿಎಂಪಿಗೆ ಕೆಲವೇ ಗಂಟೆಗಳಲ್ಲಿ ತೆರವು ಮಾಡದಂತೆ ಒತ್ತುವರಿ ತೆರವು ಸಂಬಂಧ ಬೆಂಗಳೂರು ಉತ್ತರ ತಹಶೀಲ್ದಾರ್ ನೋಟಿಸ್ಗೆ ನಿವಾಸಿಗಳು ಕೋರ್ಟ್ನಿಂದ ತಡೆ ತಂದಿದ್ದು ಈ ಬಗ್ಗೆ ತಹಶೀಲ್ದಾರ್ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದಿರಲಿಲ್ಲ. ಸದ್ಯ ವಿಷಯ ತಿಳಿದಿದ್ದು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ತಡೆಯಾಜ್ಞೆ ಬಗ್ಗೆ ಪರಿಶೀಲಿಸಿ ಸೋಮವಾರ ತೆರವು ಕಾರ್ಯಾಚರಣೆ ಆರಂಭಿಸುತ್ತೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.