ಆಡಿಯೋ ಟೇಪ್ : ಚಿತ್ತಾಪುರ ಬಿಜೆಪಿ ಅಭ್ಯರ್ಥಿ ವಿರುದ್ದ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

0
20

ಕಲಬುರಗಿ: ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಇಡೀ ಕುಟುಂಬಕ್ಕೆ‌ ಜೀವ ಬೆದರಿಕೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯ ಮೇಲೆ ತಕ್ಷಣ ಕ್ರಮಕ್ಕೆ ಕಾಂಗ್ರೆಸ್ ನಾಯಕರು ಆಗ್ರಹಿಸಿದ್ದಾರೆ.
ಈ ಕುರಿತು ಕಲಬುರಗಿಯ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ‌ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಐಸಿಸಿ ಕಾರ್ಯದರ್ಶಿ ಶ್ರೀಧರ ಬಾಬು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕುಟುಂಬವನ್ನು ಸಾಫ್ ಮಾಡುವ ಕುರಿತು ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಹೇಳಿರುವ ಆಡಿಯೋದ ಧ್ವನಿ ಗಮನಿಸಿದರೆ ಹಿರಿಯ ನಾಯಕರನ್ನು ಹಾಗೂ ಅವರ ಕುಟುಂಬವನ್ನು ದೈಹಿಕವಾಗಿ ಮುಗಿಸುವ ಸ್ಪಷ್ಟತೆ ಗೊತ್ತಾಗುತ್ತದೆ ಎಂದರು.
ಆಡಿಯೋ ಟೇಪ್ ಬಯಲಿಗೆ ಬಂದು 24 ಗಂಟೆಯಾದರೂ ಪ್ರಧಾನಿ ಈ ಕುರಿತು ಮಾತನಾಡದೆ ಮೌನವಹಿಸಿದ್ದಾರೆ. ಸಿಎಂ ಬೊಮ್ಮಾಯಿ ಈ ಕುರಿತು ತನಿಖೆ ಮಾಡುವುದಾಗಿ ಹೇಳಿದ್ದಾರೆ. ಆದರೆ, ಈ‌ ವಿಷಯವನ್ನು ಚುನಾವಣೆ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಪಕ್ಷ ಸೋಲಿನ‌ ಭೀತಿಯಿಂದಾಗಿ ಮತ್ತು ಜನರ ಗಮನ ಬೇರೆಡೆ ಸೆಳೆಯಲು ಈ‌ ರೀತಿ ಹೆದರಿಸುವ ತಂತ್ರ ಅನುಸರಿಸುತ್ತಿದೆ. ಈ ಹಿಂದೆ ರಾಜಸ್ಥಾನದ ಶಾಸಕರೊಬ್ಬರು ಕೂಡಾ ಖರ್ಗೆ ಅವರ ಸಾವಿನ ಕುರಿತು ಹೇಳಿಕೆ ನೀಡಿದ್ದರು ಎಂದು ಶ್ರೀಧರ ಬಾಬು ಆರೋಪಿಸಿದರು. ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಶಾಸಕ ಅಜಯ್ ಸಿಂಗ್, ಎಂ.ಬಿ.ಪಾಟೀಲ, ಮಾಜಿ ಶಾಸಕ ಬಿ.ಆರ್ ಪಾಟೀಲ ಮಾತನಾಡಿ ಈ ವಿಚಾರಕ್ಕೆ‌ ಸಂಬಂಧಿಸಿದಂತೆ ಪ್ರಧಾನಿ ನೇರ ಹೊಣೆಗಾರರಾಗುತ್ತಾರೆ ಹಾಗಾಗಿ ಅವರು ಮಾತನಾಡಬೇಕು ಎಂದು ಒತ್ತಾಯಿಸಿದರು.
ಗೃಹ ಇಲಾಖೆ ಹಾಗೂ ಚುನಾವಣೆ ಆಯೋಗ‌ ಈ‌ ವಿಷಯನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು. ಈಗಾಗಲೇ ಒಂದು ಕೇಸ್ ದಾಖಲಾಗಿದೆ. ಖರ್ಗೆ ಕುಟುಂಬವನ್ನು ‌ಮುಗಿಸುವ ಮಾತನಾಡಿದ್ದು ನೋಡಿದರೆ ಜನಸಾಮನ್ಯರ ಸ್ಥಿತಿ ಏನು ಎಂದು ಚಿತ್ತಾಪುರದ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಶರಣಪ್ರಕಾಶ ಪಾಟೀಲ ಹೇಳಿದರು. ಸುಭಾಷ್ ರಾಠೋಡ, ಅರವಿಂದ ಚವ್ಹಾಣ, ಲಚ್ಚಪ್ಪ ಜಮಾದಾರ ಸೇರಿದಂತೆ ಹಲವರಿದ್ದರು.

Previous articleಖರ್ಗೆ ಆಪ್ತನ ಮನೆ ಮೇಲೆ ಐಟಿ ದಾಳಿ
Next articleಕುಂದಾನಗರಿಯಲ್ಲಿ ಅಮಿತ್‌ ಶಾ ರೋಡ್​ ಶೋ