ಸುಪ್ರೀಂ ಕೋರ್ಟ್‌ನಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ಸಮರ್ಥ ವಾದ ಮಂಡನೆಗೆ ಸರ್ಕಾರ ಸಿದ್ಧ: ಮುಖ್ಯಮಂತ್ರಿ

0
20
ಗಡಿ ವಿವಾದ

ಹುಬ್ಬಳ್ಳಿ: ಸುಪ್ರೀಂಕೋರ್ಟ್‌ಲ್ಲಿ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ವಿಚಾರಣೆ ನವೆಂಬರ್ 23ಕ್ಕೆ ನಿಗದಿಯಾಗಿದೆ. ಈ ವಿವಾದದಲ್ಲಿ ಗೆಲ್ಲಲು ಪ್ರಭಾವಿ ಮತ್ತು ಹಿರಿಯ ವಕೀಲರನ್ನೇ ನೇಮಿಸಬೇಕು ಎಂದು ಎಡ್ವೋಕೇಟ್ ಜನರಲ್ ಅವರಿಗೆ ಆದೇಶಿಸಿದ್ದೇನೆ. ವಿಚಾರಣೆ ವೇಳೆ ಸಮರ್ಥ ವಾದ ಮಂಡನೆಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರವು ಸುಮ್ಮನೆ ಕುಳಿತಿಲ್ಲ. ಗಡಿ ವಿಚಾರದಲ್ಲಿ ನಮ್ಮ ರಾಜ್ಯದ ಹಿತಾಸಕ್ತಿಗೆ ಏನೇನು ವಿಷಯಗಳನ್ನು ವಿಚಾರಣೆ ಹಂತದಲ್ಲಿ ಮಂಡನೆ ಮಾಡಬೇಕು ಎಂಬುದರ ಬಗ್ಗೆ ಸಮಗ್ರ ಸಿದ್ಧತೆ ಮಾಡಿದ್ದೇವೆ ಎಂದರು.
ಸಿಇಟಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಸರ್ಕಾರದ ಕಾಳಜಿ ಇದೆ. ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಸರ್ಕಾರವು ನೋಡಿಕೊಳ್ಳುತ್ತದೆ. ಈ ಕುರಿತು ಈಗಾಗಲೇ ಉನ್ನತ ಶಿಕ್ಷಣ ಸಚಿವರೊಂದಿಗೆ, ಅಧಿಕಾರಿಗಳೊಂದಿಗೆ ಚರ್ಚೆ ಮಾಡಿದ್ದೇವೆ. ವಿದ್ಯಾರ್ಥಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ. ಈ ವಿಚಾರದಲ್ಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಬಗ್ಗೆ ಕಾನೂನು ತಜ್ಞರೊಂದಿಗೆ ಚರ್ಚೆ ಮಾಡಲಿದ್ದೇವೆ. ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಹುಬ್ಬಳ್ಳಿಯಲ್ಲಿ ಆರಂಭಿಸಲಾದ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಇನ್ನಷ್ಟು ಉನ್ನತೀಕರಿಸಲು ಯೋಜನೆ ರೂಪಿಸಲಾಗಿದೆ. ಪೊಲೀಸ್ ಮತ್ತು ತನಿಖಾ ವ್ಯವಸ್ಥೆ ಸುಧಾರಣೆಗೆ ಏನೇನು ಉಪಕ್ರಮಗಳನ್ನು ಕೈಗೊಳ್ಳಬೇಕೊ ಅದೆಲ್ಲವನ್ನೂ ಸರ್ಕಾರವು ದೂರದೃಷ್ಟಿಯಿಂದ ಮಾಡುತ್ತಿದೆ. ಪೊಲೀಸ್ ಸಿಬ್ಬಂದಿ ಕಂಪ್ಯೂಟರ್ ಕಲಿಕೆಯೂ ಒಂದು ಭಾಗವಾಗಿದೆ. ಸೈಬರ್ ಕ್ರೈಂ ಹೆಚ್ಚಾಗಿವೆ. ಪತ್ತೆ ಕಾರ್ಯಕ್ಕೆ ತಂತ್ರಜ್ಞಾನ ಅಳವಡಿಸಿಕೊಳ್ಳುವುದು ಅವಶ್ಯ. ಇದರಿಂದ ಸಾರ್ವಜನಿಕರಿಗೆ ಪೊಲೀಸ್ ಆಡಳಿತ ವ್ಯವಸ್ಥೆ ಉತ್ತಮ ಸೇವೆ ನೀಡಲು ಸಹಕಾರಿಯಾಗುತ್ತದೆ ಎಂದರು.
ಮಹಿಳೆಯೊಂದಿಗೆ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ನಡೆದುಕೊಂಡ ರೀತಿಯ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಆಕ್ಷೇಪ, ಆಕ್ರೋಶ ವ್ಯಕ್ತವಾಗಿದೆ ಈ ಬಗ್ಗೆ ಏನು ಹೇಳುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಆ ದಿನ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಮಾಹಿತಿ ಪಡೆಯುತ್ತಿದ್ದೇನೆ. ಈ ಕುರಿತು ಅರವಿಂದ ಲಿಂಬಾವಳಿ ಅವರೊಂದಿಗೆ ಮಾತನಾಡುತ್ತೇನೆ ಎಂದರು.

Previous articleಬೆಂಗಳೂರು ಮೂಲ ಸೌಕರ್ಯ ಸುಧಾರಣೆಗೆ ತ್ವರಿತ ಕ್ರಮ ಕೈಗೊಳ್ಳಿ: ಡಿಕೆಶಿ
Next articleರಸ್ತೆ ಅಪಘಾತದಲ್ಲಿ ಸೈರಸ್ ಮಿಸ್ತ್ರಿ ಸಾವು