ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ (ಬಿಎಂಟಿಸಿ) ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್‌ನಲ್ಲಿ ಇಂದು ಸಂಭವಿಸಿದ ಭಾರಿ ಬೆಂಕಿಯಲ್ಲಿ 45 ವರ್ಷದ ಬಸ್ ಕಂಡಕ್ಟರ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಲಕ್ಷ್ಮಣ್ ಬಿ ನಿಂಬರಗಿ ಮಾತನಾಡಿ, ಸುಮನಹಳ್ಳಿ ಬಸ್ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬಸ್ ಚಾಲಕ ಪ್ರಕಾಶ್ (39) ಅವರು ಘಟನೆಯನ್ನು ಮೊದಲು ನಸುಕಿನ ಜಾವ 4:45 ಕ್ಕೆ ನೋಡಿದ್ದಾರೆ. ಗುರುವಾರ ರಾತ್ರಿ 10.30ರ ಸುಮಾರಿಗೆ ಡಿ ಗ್ರೂಪ್ ನಿಲ್ದಾಣದಲ್ಲಿ ಬಸ್ ಚಾಲಕ ಪ್ರಕಾಶ್ ವಾಹನ ನಿಲ್ಲಿಸಿ ಬಸ್ ನಿಲ್ದಾಣದ ತಂಗುದಾಣದಲ್ಲಿ ಮಲಗಲು ತೆರಳಿದ್ದು, ಕಂಡಕ್ಟರ್ ಬಸ್‌ನಲ್ಲೇ ಮಲಗಿದ್ದಾರೆ ಎಂದು ಡಿಸಿಪಿ ಲಕ್ಷ್ಮಣ್ ತಿಳಿಸಿದ್ದಾರೆ.
ಕಂಡಕ್ಟರ್‌ಗೆ ಶೇ.80ರಷ್ಟು ಸುಟ್ಟ ಗಾಯವಾಗಿದೆ ಎಂದು ಡಿಸಿಪಿ ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ವಾಹನದೊಂದಿಗೆ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಷ್ಟರಲ್ಲಿ ಶೇ. 80ರಷ್ಟು ಸುಟ್ಟ ಗಾಯಗಳಿಂದಾಗಿ ಮುತ್ತಯ್ಯ ಸ್ವಾಮಿ ಸಜೀವ ದಹನವಾಗಿರುವುದು ಕಂಡು ಬಂದಿದೆ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ.