SK Home Ad
Home ಕ್ರೀಡೆ ಭಾರತಕ್ಕೆ 3 ವಿಕೆಟ್‌ಗಳ ರೋಚಕ ಶಾಕ್ ಕೊಟ್ಟ ಪಾಕಿಸ್ತಾನ, ಅಂಡರ್-19 ಏಷ್ಯಾ ಕಪ್‌ನಲ್ಲಿ ಹಂಝಾ ಜಹೂರ್...

ಭಾರತಕ್ಕೆ 3 ವಿಕೆಟ್‌ಗಳ ರೋಚಕ ಶಾಕ್ ಕೊಟ್ಟ ಪಾಕಿಸ್ತಾನ, ಅಂಡರ್-19 ಏಷ್ಯಾ ಕಪ್‌ನಲ್ಲಿ ಹಂಝಾ ಜಹೂರ್ ಅಬ್ಬರ

0
8

ಒಮನ್‌ನ ಅಲ್ ಅಮ್ರತ್ ಮೈದಾನದಲ್ಲಿ ನಡೆದ ಅಂಡರ್-19 ಏಷ್ಯಾ ಕಪ್ 2026ರ ಹೈ-ವೋಲ್ಟೇಜ್ ಕದನದಲ್ಲಿ ಭಾರತ ತಂಡ ಬದ್ಧವೈರಿ ಪಾಕಿಸ್ತಾನ ವಿರುದ್ಧ 3 ವಿಕೆಟ್‌ಗಳ ಅಂತರದ ರೋಚಕ ಸೋಲು ಅನುಭವಿಸಿದೆ.

ಮೊದಲು ಬ್ಯಾಟಿಂಗ್ ಮಾಡಿ 208 ರನ್‌ಗಳಿಗೆ ಆಲೌಟ್ ಆಗಿದ್ದ ಭಾರತ, ಎದುರಾಳಿಯನ್ನು ಕೇವಲ 61 ರನ್‌ಗಳಿಗೆ 5 ವಿಕೆಟ್ ಕೆಡವಿ ಗೆಲುವಿನ ಹೊಸ್ತಿಲಿಗೆ ತಂದು ನಿಲ್ಲಿಸಿತ್ತು.

ಆದರೆ ಪಾಕ್ ವಿಕೆಟ್ ಕೀಪರ್ ಬ್ಯಾಟರ್ ಹಂಝಾ ಜಹೂರ್ ಸಿಡಿಸಿದ ಅಜೇಯ ಶತಕದ ಬಲದಿಂದ ಪಾಕಿಸ್ತಾನ ಸೋಲಿನ ದವಡೆಯಿಂದ ಪಾರಾಗಿ ಐತಿಹಾಸಿಕ ಜಯ ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಅರ್ಜುನ್ ರಜಪೂತ್ (107 ರನ್, 85 ಎಸೆತ) ಏಕಾಂಗಿ ಹೋರಾಟ ನಡೆಸಿ ಅದ್ಭುತ ಶತಕ ಸಿಡಿಸಿದರು. ಆದರೆ ಮಾಜಿ ದಿಗ್ಗಜ ಆಟಗಾರರ ಪುತ್ರರಾದ ಆರ್ಯವೀರ್ ಸೆಹ್ವಾಗ್ (22) ಹಾಗೂ ಅನ್ವಯ್ ದ್ರಾವಿಡ್ ಬ್ಯಾಟಿಂಗ್‌ನಲ್ಲಿ ಹೆಚ್ಚು ಮಿಂಚಲಿಲ್ಲ. ಭಾರತ 46.3 ಓವರ್‌ಗಳಲ್ಲಿ 208 ರನ್‌ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ರಿಜ್ವಾನುಲ್ಲಾ, ಅಲಿ ರಜಾ ಮತ್ತು ನಿಕಾಬ್ ಶಫೀಕ್ ತಲಾ 3 ವಿಕೆಟ್ ಕಬಳಿಸಿದರು.

ಬಳಿಕ ಸಾಧಾರಣ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಭಾರತೀಯ ಬೌಲರ್‌ಗಳ ಸಂಘಟಿತ ದಾಳಿಗೆ ನಲುಗಿ 61 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಭಾರತದ ಪರ ಸ್ಪಿನ್ನರ್ ಮನಲ್ ಚೌಹಾಣ್ 3 ವಿಕೆಟ್ ಕಿತ್ತು ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದರು.

ಆದರೆ ಈ ಹಂತದಲ್ಲಿ ಕ್ರೀಸ್‌ಗೆ ಬಂದ ಹಂಝಾ ಜಹೂರ್ (100* ರನ್, 108 ಎಸೆತ) ಹಾಗೂ ಹುಸ್ನೈನ್ ಅಬ್ಬಾಸ್ ದಾರ್ (35) ಆರನೇ ವಿಕೆಟ್‌ಗೆ ಅಮೂಲ್ಯ 107 ರನ್‌ಗಳ ಜೊತೆಯಾಟವಾಡಿ ಪಂದ್ಯದ ಗತಿಯನ್ನೇ ಬದಲಿಸಿದರು.

ಅಂತಿಮ ಹಂತದಲ್ಲಿ ಭಾರತ ವಿಕೆಟ್ ಕಬಳಿಸಿ ಕಮ್‌ಬ್ಯಾಕ್ ಮಾಡಲು ಯತ್ನಿಸಿದರೂ, ಸಂಯಮದ ಬ್ಯಾಟಿಂಗ್ ಪ್ರದರ್ಶಿಸಿದ ಜಹೂರ್ ಬೌಂಡರಿ ಬಾರಿಸಿ ಶತಕ ಪೂರೈಸುವ ಮೂಲಕ 48.1 ಓವರ್‌ಗಳಲ್ಲಿ ಪಾಕಿಸ್ತಾನಕ್ಕೆ 209/7 ರನ್ ಗಳಿಸಿ ಗೆಲುವು ತಂದುಕೊಟ್ಟರು. ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆದ್ದಿದ್ದ ಭಾರತಕ್ಕೆ ಇದು ಟೂರ್ನಿಯಲ್ಲಿ ಮೊದಲ ಹಿನ್ನಡೆಯಾಗಿದೆ.