SK Home Ad
Home ನಮ್ಮ ಜಿಲ್ಲೆ ಗದಗ ದಲ್ಲಾಳಿಗಳ ಕಣ್ಣಾಮುಚ್ಚಾಲೆಗೆ ಅನ್ನದಾತ ಕಂಗಾಲು: ರೂ.6 ಸಾವಿರದಿಂದ ರೂ.2,500ಕ್ಕೆ ಈರುಳ್ಳಿ ದರ ಪಾತಾಳಕ್ಕೆ ಕುಸಿತ!

ದಲ್ಲಾಳಿಗಳ ಕಣ್ಣಾಮುಚ್ಚಾಲೆಗೆ ಅನ್ನದಾತ ಕಂಗಾಲು: ರೂ.6 ಸಾವಿರದಿಂದ ರೂ.2,500ಕ್ಕೆ ಈರುಳ್ಳಿ ದರ ಪಾತಾಳಕ್ಕೆ ಕುಸಿತ!

0
21

ಗದಗ ಎಪಿಎಂಸಿ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೇವಲ ನಾಲ್ಕೇ ದಿನಗಳಲ್ಲಿ ದಿಢೀರ್ ಕುಸಿತ ಕಂಡಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತರು ಕಣ್ಣೀರು ಹಾಕುವಂತಾಗಿದೆ. ನಾಲ್ಕು ದಿನಗಳ ಹಿಂದಷ್ಟೇ ಕ್ವಿಂಟಾಲ್‌ಗೆ ರೂ.5,000 ರಿಂದ ರೂ.6,000 ರವರೆಗಿದ್ದ ಬೆಲೆ, ಇದೀಗ ಏಕಾಏಕಿ ರೂ.2,500 ರಿಂದ ರೂ.3,500 ಕ್ಕೆ ಇಳಿಕೆಯಾಗಿದೆ.

ಮಾರುಕಟ್ಟೆಯಲ್ಲಿ ದಲ್ಲಾಳಿಗಳು ನಡೆಸುತ್ತಿರುವ ವ್ಯವಸ್ಥಿತ ದಂಧೆಯೇ ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಆಕ್ರೋಶಗೊಂಡಿರುವ ರೈತರು, ಕೂಡಲೇ ಕನಿಷ್ಠ ರೂ.6,000 ಬೆಂಬಲ ಬೆಲೆ ನಿಗದಿಪಡಿಸದಿದ್ದರೆ ಬೀದಿಗಿಳಿದು ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಭೀಕರ ಬರ ಮತ್ತು ನೀರಿನ ಕೊರತೆಯ ನಡುವೆಯೂ ಸಾವಿರಾರು ರೂಪಾಯಿ ಬಂಡವಾಳ ಹೂಡಿ ಬೆಳೆದ ಈರುಳ್ಳಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿದ್ದಂತೆ ದಲ್ಲಾಳಿಗಳು ಬೆಲೆ ಇಳಿಸಿ ಆಟ ಶುರುಮಾಡಿದ್ದಾರೆ. ಮಾಧ್ಯಮಗಳ ಕ್ಯಾಮೆರಾ ಇದ್ದಾಗ ಮಾತ್ರ ಬೆಲೆ ಏರಿಸಿ, ನಂತರ ಕೃತಕವಾಗಿ ದರ ಕುಸಿಯುವಂತೆ ಮಾಡಿ ರೈತರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬೀಜ, ರಸಗೊಬ್ಬರ ಮತ್ತು ಕೂಲಿ ವೆಚ್ಚವೂ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಾಡಿದ ಸಾಲ ತೀರಿಸುವುದು ಹೇಗೆಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ. ಇಷ್ಟೆಲ್ಲಾ ಅವಾಂತರ ನಡೆಯುತ್ತಿದ್ದರೂ ಎಪಿಎಂಸಿ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಕಚೇರಿ ಬಿಟ್ಟು ಹೊರಬರದೆ ಜಾಣ ಮೌನ ವಹಿಸಿದೆ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಮಧ್ಯಪ್ರವೇಶಿಸಿ ದಲ್ಲಾಳಿಗಳ ಹಾವಳಿಗೆ ಬ್ರೇಕ್ ಹಾಕಬೇಕು ಮತ್ತು ಪ್ರತಿ ಕ್ವಿಂಟಾಲ್‌ಗೆ ಕನಿಷ್ಠ ರೂ.6,000 ಬೆಲೆ ಖಾತರಿಪಡಿಸಬೇಕು ಎಂದು ಅನ್ನದಾತರು ಪಟ್ಟುಹಿಡಿದಿದ್ದಾರೆ.