SK Home Ad
Home ಸಿನಿ ಮಿಲ್ಸ್ ‘ಪಪ್ಪಿ’ ತಂಡದಿಂದ ಜವಾರಿ ಸೊಗಡಿನ ‘ನಾವು ತುಂಬಾ ಒಳ್ಳೆಯವರು’: ಟ್ರೇಲರ್ ಔಟ್, ಡಿಸೆಂಬರ್‌ನಲ್ಲಿ ರಿಲೀಸ್

‘ಪಪ್ಪಿ’ ತಂಡದಿಂದ ಜವಾರಿ ಸೊಗಡಿನ ‘ನಾವು ತುಂಬಾ ಒಳ್ಳೆಯವರು’: ಟ್ರೇಲರ್ ಔಟ್, ಡಿಸೆಂಬರ್‌ನಲ್ಲಿ ರಿಲೀಸ್

0
30

ಬೆಂಗಳೂರು: ಕಳೆದ ವರ್ಷ ಯಶಸ್ಸು ಕಂಡಿದ್ದ ‘ಪಪ್ಪಿ’ ಸಿನಿಮಾದ ಯಶಸ್ವಿ ತಂಡದಿಂದ ಇದೀಗ ಮತ್ತೊಂದು ಜವಾರಿ ಸೊಗಡಿನ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ನಿರ್ದೇಶಕ ಆಯುಷ್ ಮಲ್ಲಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ನೂತನ ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂದು ಹೆಸರಿಡಲಾಗಿದ್ದು, ‘ಪಪ್ಪಿ’ ಸಿನಿಮಾದಲ್ಲಿದ್ದ ಬಹುತೇಕ ಕಲಾವಿದರೇ ಈ ಚಿತ್ರದಲ್ಲೂ ಮುಂದುವರಿದಿದ್ದಾರೆ.

ಶೀರ್ಷಿಕೆಗೆ ತಕ್ಕಂತೆ ಈ ಚಿತ್ರವು ಸಂಪೂರ್ಣ ಹಾಸ್ಯಪ್ರಧಾನ ಕೌಟುಂಬಿಕ ಕಥಾಹಂದರವನ್ನು ಹೊಂದಿದೆ. ಒಂದು ವಠಾರದ ಸುತ್ತ ಹೆಣೆಯಲಾದ ನೈಜ ಬದುಕಿನ ಕಥೆಯೊಂದಿಗೆ ಹೆಳವ ಸಮುದಾಯದ ವಿಶಿಷ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ಈ ಸಿನಿಮಾದಲ್ಲಿ ಪರಿಚಯಿಸುವ ಪ್ರಯತ್ನ ಮಾಡಲಾಗಿದೆ. ಉತ್ತರ ಕರ್ನಾಟಕದ ಜನಜೀವನ ಹಾಗೂ ಅಪ್ಪಟ ಆಡುಭಾಷೆಯ ಸೊಗಡು ಇಡೀ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.

ಚಿತ್ರೀಕರಣಕ್ಕಾಗಿ ವಿಜಯಪುರ, ಮೇನದಾಳ್ ಹಾಗೂ ಗದಗ ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಸತತ 52 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ನಿರ್ದೇಶನದ ಜೊತೆಗೆ ಆಯುಷ್ ಮಲ್ಲಿ ಪ್ರಮುಖ ಪಾತ್ರದಲ್ಲೂ ನಟಿಸಿದ್ದಾರೆ. ‘ಪಪ್ಪಿ’ ಖ್ಯಾತಿಯ ಜಗದೀಶ್ ಕೊಪ್ಪಳ, ಆದಿ, ದುರುಗಪ್ಪ, ರೇಣುಕಾ ಅವರೊಂದಿಗೆ ರಂಗಭೂಮಿ ಕಲಾವಿದರಾದ ಸಹನಾ ಪ್ರಕಾಶ್, ಸಂಜನಾ, ಅಂದಪ್ಪ ಸಂಕನೂರು ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.

ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡವು, ಮುಂಬರುವ ಡಿಸೆಂಬರ್‌ನಲ್ಲಿ ಸಿನಿಮಾವನ್ನು ರಾಜ್ಯಾದ್ಯಂತ ಅದ್ಧೂರಿಯಾಗಿ ರಿಲೀಸ್ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದೆ.