SK Home Ad
Home ನಮ್ಮ ಜಿಲ್ಲೆ ದಾವಣಗೆರೆ ದಾವಣಗೆರೆ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿ

ದಾವಣಗೆರೆ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿ

0
8
ಜಂಗಮ ಸೌಹಾರ್ದ ಸಹಕಾರಿಯಲ್ಲಿ ₹1.49 ಕೋಟಿ ವಂಚನೆ ಆರೋಪ

ದಾವಣಗೆರೆಯಲ್ಲಿ ಸಹಕಾರ ಸಂಘದಲ್ಲಿ ₹1.49 ಕೋಟಿ ವಂಚನೆ ಆರೋಪ: ನಕಲಿ ಸಹಿ, ಖೊಟ್ಟಿ ದಾಖಲೆ ಸೃಷ್ಟಿಸಿದ ಆರೋಪ

ದಾವಣಗೆರೆ: ನಗರದ ಜಂಗಮ ಸೌಹಾರ್ದ ಸಹಕಾರ ಸಂಘದಲ್ಲಿ ಸದಸ್ಯರ ನಕಲಿ ಸಹಿ ಹಾಗೂ ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ₹1.49 ಕೋಟಿ ಹಣ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಜಂಗಮ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ ಪಿ.ಜೆ. (63) ಅವರು ನೀಡಿದ ದೂರಿನ ಪ್ರಕಾರ, ಸಂಘವು 2010–11ನೇ ಸಾಲಿನಲ್ಲಿ ಆರಂಭವಾಗಿದ್ದು, ಹೊನ್ನಾಳಿಯಲ್ಲಿಯೂ ಶಾಖೆ ಹೊಂದಿದೆ. ಸಂಘವು ಸದಸ್ಯರಿಗೆ ಜಮೀನು, ವಾಹನ ಖರೀದಿ, ಆಸ್ತಿ ಆಧಾರಿತ ಹಾಗೂ ಸಂಬಳ ಆಧಾರಿತ ಸಾಲಗಳನ್ನು ನೀಡುವುದರ ಜತೆಗೆ ಮುದ್ದತ್ ಠೇವಣಿಗಳ ಮೇಲೆಯೂ ಸಾಲ ಸೌಲಭ್ಯ ಒದಗಿಸುತ್ತಿದೆ. ಸಂಘದ ವಾರ್ಷಿಕ ವಹಿವಾಟು ₹10 ಕೋಟಿಗೂ ಅಧಿಕವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಲೆಕ್ಕಪರಿಶೋಧನೆಯಲ್ಲಿ ಹಣ ದುರುಪಯೋಗದ ಉಲ್ಲೇಖ : 2021–22ನೇ ಸಾಲಿನ ವರದಿಯಲ್ಲಿ, 2017ರಿಂದ 2021ರವರೆಗಿನ ಅವಧಿಯ ಲೆಕ್ಕಪರಿಶೋಧನೆ ನಡೆಸಿದಾಗ ಸುಮಾರು ₹7,28,35,941 ಹಣ ದುರುಪಯೋಗವಾಗಿರುವ ಬಗ್ಗೆ ವರದಿ ನೀಡಲಾಗಿದೆ ಎಂದು ಅಧ್ಯಕ್ಷರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂಘದ ನಗದು ಗುಮಾಸ್ತ ಪವನ್ ಕುಮಾರ್ ಅವರು ಸದಸ್ಯರ ನಕಲಿ ಸಹಿ ಮಾಡಿ, ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಸದಸ್ಯರ ಮುದ್ದತ್ ಠೇವಣಿಗಳ ಆಧಾರದಲ್ಲಿ ಒಟ್ಟು ₹1.49 ಕೋಟಿ ವಂಚನೆ ಮಾಡಿದ್ದಾರೆ ಎಂಬುದು ಪ್ರಮುಖ ಆರೋಪವಾಗಿದೆ.

ಇದಲ್ಲದೆ, ಸಾಲಗಾರರಿಂದ ಹೆಚ್ಚಿನ ಬಡ್ಡಿ ವಸೂಲಿ ಮಾಡಿ ಸಂಘಕ್ಕೆ ಕಡಿಮೆ ಮೊತ್ತ ಪಾವತಿಸಿರುವುದು ಹಾಗೂ ಲಾಭಾಂಶ ಹಂಚಿಕೆಯಲ್ಲಿಯೂ ಸದಸ್ಯರಿಗೆ ವಂಚನೆ ಮಾಡಿರುವ ಆರೋಪಗಳೂ ದೂರಿನಲ್ಲಿವೆ. ಈ ಆರೋಪಗಳ ಸತ್ಯಾಸತ್ಯತೆ ತನಿಖೆಯಿಂದ ತಿಳಿದುಬರಬೇಕಿದೆ.

ವಂಚನೆಗೊಳಗಾದ ಷೇರುದಾರರಿಗೆ ಪೊಲೀಸರ ಮನವಿ : ಪ್ರಕರಣದ ತನಿಖೆಗೆ ಸಹಕರಿಸುವಂತೆ ಜಂಗಮ ಸೌಹಾರ್ದ ಸಹಕಾರ ಸಂಘದಲ್ಲಿ ವಂಚನೆಗೆ ಒಳಗಾಗಿರುವ ಷೇರುದಾರರಿಗೆ ಪೊಲೀಸರು ಮನವಿ ಮಾಡಿದ್ದಾರೆ. ತಮ್ಮ ಬಳಿ ಇರುವ ಮಾಹಿತಿ ಹಾಗೂ ಸಂಬಂಧಿತ ದಾಖಲೆಗಳೊಂದಿಗೆ ದಾವಣಗೆರೆ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯ ತನಿಖಾಧಿಕಾರಿಗಳು ಅಥವಾ ಪೊಲೀಸ್ ಉಪಾಧೀಕ್ಷಕರನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

☎ ಸಂಪರ್ಕ ಸಂಖ್ಯೆ: 08192-225119

ಪ್ರಕರಣದಲ್ಲಿ ದಾಖಲಾಗಿರುವ ಆರೋಪಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದು, ಹಣಕಾಸಿನ ವ್ಯವಹಾರಗಳು, ದಾಖಲೆಗಳು ಹಾಗೂ ಸಂಬಂಧಪಟ್ಟವರ ಪಾತ್ರದ ಬಗ್ಗೆ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.