SK Home Ad
Home ಸುದ್ದಿ ಮೋದಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ವ್ಯಂಗ್ಯ: ಡಿಕೆಶಿ ವಿರುದ್ಧ ನಿಖಿಲ್ ಕೆಂಡಾಮಂಡಲ

ಮೋದಿ ಹುಟ್ಟುಹಬ್ಬಕ್ಕೆ ಕಾಂಗ್ರೆಸ್ ವ್ಯಂಗ್ಯ: ಡಿಕೆಶಿ ವಿರುದ್ಧ ನಿಖಿಲ್ ಕೆಂಡಾಮಂಡಲ

0
24

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದಂದು (ಸೆ. 17) ಕರ್ನಾಟಕ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ನಡೆದುಕೊಂಡ ರೀತಿ ರಾಜಕೀಯ ಸಂಸ್ಕೃತಿಯ ಅಧಃಪತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ತಮ್ಮ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ನೇರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವೇದಿಕೆಯಲ್ಲಿ ಸಂಸ್ಕೃತ ಶ್ಲೋಕಗಳನ್ನು ಹೇಳಿದ ತಕ್ಷಣ ರಾಜಕೀಯ ಪ್ರಬುದ್ಧತೆ ಅಥವಾ ಸಂಸ್ಕಾರ ಬರುವುದಿಲ್ಲ. ನಾಯಕನೊಬ್ಬನ ಹುಟ್ಟುಹಬ್ಬದ ಸಂದರ್ಭದಲ್ಲೂ ವೈಯಕ್ತಿಕ ದ್ವೇಷ ಹಾಗೂ ನಿಂದನೆಯ ರಾಜಕಾರಣ ಮಾಡುವುದು ಅತ್ಯಂತ ಖಂಡನೀಯ ಎಂದಿದ್ದಾರೆ.

ಪ್ರಧಾನಿ ಮೋದಿ ಅವರ 25 ವರ್ಷಗಳ ಸುದೀರ್ಘ ಸಾರ್ವಜನಿಕ ಸೇವೆಯನ್ನು ಇಡೀ ದೇಶವೇ ಸಂಭ್ರಮಿಸುತ್ತಿರುವಾಗ, ಕಾಂಗ್ರೆಸ್ ನಾಯಕರು ಅಸಭ್ಯ ಕಾರ್ಯಕ್ರಮಗಳನ್ನು ನಡೆಸಿ ಸೌಜನ್ಯ ಮರೆತಿದ್ದಾರೆ. ಸರ್ಕಾರದ ನೀತಿಗಳನ್ನು ಟೀಕಿಸಲು ಪ್ರಜಾಪ್ರಭುತ್ವದಲ್ಲಿ ಹಕ್ಕಿದೆಯಾದರೂ, ವೈಯಕ್ತಿಕ ಸಂದರ್ಭದಲ್ಲಾದರೂ ಇಂತಹ ಕೀಳುಮಟ್ಟದ ರಾಜಕೀಯ ಬಿಟ್ಟು ಸೌಜನ್ಯ ಮೆರೆಯುವುದನ್ನು ಕಲಿಯಿರಿ ಎಂದು ಸಲಹೆ ನೀಡಿದ್ದಾರೆ.

ಪ್ರಧಾನಿ ಮೋದಿ ಜನ್ಮದಿನದ ಅಂಗವಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ಯುವ ಕಾಂಗ್ರೆಸ್ ನಾಯಕರು ಮೋದಿ ಅವರ ವ್ಯಂಗ್ಯಚಿತ್ರ ಮತ್ತು ಪೋಸ್ಟರ್‌ಗಳನ್ನು ಬಿಡುಗಡೆ ಮಾಡಿದ್ದರು. ಅಲ್ಲದೆ… ವಾರ್ಷಿಕ 2 ಕೋಟಿ ಉದ್ಯೋಗ ನೀಡದಿದ್ದನ್ನು ಖಂಡಿಸಿ ಈ ದಿನವನ್ನು ‘ನಿರುದ್ಯೋಗ ದಿನಾಚರಣೆ’ ಎಂದು ಆಚರಿಸಿ, ಪಕೋಡ ಹಂಚಿ ಪ್ರತಿಭಟಿಸಿದ್ದರು. ಈ ನಡೆ ಸಾರ್ವಜನಿಕ ವಲಯದಲ್ಲೂ ಚರ್ಚೆಗೆ ಗ್ರಾಸವಾಗಿದೆ.