ನವದೆಹಲಿ: ಭಾರತದ ಪ್ರಮುಖ ಸ್ವದೇಶಿ ವಿಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ‘ಜೀ5’ (Zee5) ತನ್ನ ಬಳಕೆದಾರರಿಗೆ ಕಂಟೆಂಟ್ ಹುಡುಕಾಟ ಮತ್ತು ವೀಕ್ಷಣೆಯ ಅನುಭವವನ್ನು ಸಂಪೂರ್ಣವಾಗಿ ಹೊಸ ಎತ್ತರಕ್ಕೆ ಕೊಂಡೊಯ್ಯಲು ನವೀನ ರೂಪದಲ್ಲಿ ಮರುಪ್ರವೇಶ ಪಡೆದಿದೆ.
ಮೊಬೈಲ್ ಹಾಗೂ ಕನೆಕ್ಟೆಡ್ ಟಿವಿಗಳಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದಿರುವ ಜೀ5, ಸ್ಮಾರ್ಟ್ ಪರ್ಸನ್ ಲೈಸಷನ್, ಕೃತಕ ಬುದ್ಧಿಮತ್ತೆ (AI) ಆಧಾರಿತ ಸರ್ಚಿಂಗ್ ವ್ಯವಸ್ಥೆ, ಆಕರ್ಷಕ ದೃಶ್ಯ ನ್ಯಾವಿಗೇಷನ್ ಮತ್ತು ಯಾವುದೇ ಸ್ಕ್ರೀನ್ನಲ್ಲೂ ಸರಾಗವಾಗಿ ವೀಕ್ಷಿಸಬಹುದಾದ ತಂತ್ರಜ್ಞಾನದೊಂದಿಗೆ ಸಜ್ಜಾಗಿದೆ.
ಚಂದಾದಾರಿಕೆ, ಪ್ಲೇಬ್ಯಾಕ್, ಲಾಗಿನ್, ಕಂಟೆಂಟ್ ಹಾಗೂ ಡಿವೈಸ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕ್ಷಣಾರ್ಧದಲ್ಲಿ ಬಗೆಹರಿಸಲು ಸುಧಾರಿತ AI ಆಧಾರಿತ ಕಸ್ಟಮರ್ ಸಪೋರ್ಟ್ ಸಹಾಯಕವನ್ನು ಪರಿಚಯಿಸಲಾಗಿದೆ.
ತನ್ನ ಕಂಟೆಂಟ್ ಭಂಡಾರವನ್ನು ಗಣನೀಯವಾಗಿ ವಿಸ್ತರಿಸಿರುವ Zee5, ಕ್ರೀಡಾಪ್ರಿಯರಿಗಾಗಿ ಜಾಗತಿಕ ಕ್ರೀಡಾಕೂಟವಾದ ‘ಫಿಫಾ ವಿಶ್ವಕಪ್ 2026 ಮತ್ತು 2030’ರ ಡಿಜಿಟಲ್ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದ್ದಲ್ಲದೆ, ಬುಂಡೆಸ್ಲಿಗಾ, ಸೀರಿ ಎ (Serie A) ಹಾಗೂ ಕೊಪ್ಪಾ ಇಟಾಲಿಯಾದಂತಹ ಪ್ರಮುಖ ಕ್ರೀಡೆಗಳ ನೇರ ಪ್ರಸಾರ ಒದಗಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಪಿವಿಆರ್ ಐನಾಕ್ಸ್ ಪಿಕ್ಚರ್ಸ್ ಮತ್ತು ಲಯನ್ಸ್ಗೇಟ್ ಪ್ಲೇ ಜೊತೆಗಿನ ಪಾಲುದಾರಿಕೆಯ ಮೂಲಕ ವಿಶ್ವದರ್ಜೆಯ ಪ್ರೀಮಿಯಂ ಇಂಗ್ಲಿಷ್ ಎಂಟರ್ಟೈನ್ಮೆಂಟ್ ವಿಭಾಗವನ್ನು ಪ್ರಕಟಿಸಿದೆ.
ಇನ್ನೊಂದೆಡೆ, ಯಾವುದೇ ಚಂದಾದಾರಿಕೆ ಶುಲ್ಕವಿಲ್ಲದೆಯೇ ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದಾದ ‘ಫ್ರೀ 5’ (Free 5) ವಿಭಾಗವನ್ನು ಕೂಡ ಆಕರ್ಷಕ ರೂಪದಲ್ಲಿ ಪರಿಚಯಿಸಲಾಗಿದೆ. ಈ ವಿಭಾಗದಲ್ಲಿ ಜನಪ್ರಿಯ ಸರಣಿಗಳು, ಚಲನಚಿತ್ರಗಳು, ಕೊರಿಯನ್ ಮತ್ತು ಚೈನೀಸ್ ಡ್ರಾಮಾಗಳು, ಅನಿಮೆ, ಲೈವ್ ನ್ಯೂಸ್, ಮೈಕ್ರೋ ಡ್ರಾಮಾ ಹಾಗೂ ಡಿಜಿಟಲ್ ಕ್ರಿಯೇಟರ್ಗಳ ಕಂಟೆಂಟ್‌ಗಳು ಲಭ್ಯವಿರಲಿವೆ.
ಯಾವುದೇ ಶುಲ್ಕವಿಲ್ಲದೆ ಅಪಾರ ಪ್ರಮಾಣದ ಮನರಂಜನೆಯನ್ನು ಒದಗಿಸುವ ಈ ವಿಸ್ತೃತ ವೇದಿಕೆಯು ಜಾಹೀರಾತುದಾರರಿಗೂ ವಿಶಾಲ ಶ್ರೇಣಿಯ ಗ್ರಾಹಕರನ್ನು ತಲುಪಲು ಹೊಸ ಮಾರುಕಟ್ಟೆ ಅವಕಾಶಗಳನ್ನು ತೆರೆದಿಟ್ಟಿದೆ.
ಈ ನೂತನ ಹೆಜ್ಜೆಯ ಕುರಿತು ಮಾತನಾಡಿದ ಜೀ5 ಇಂಡಿಯಾ ಮತ್ತು AI & ಇನ್ನೋವೇಶನ್ ಬ್ಯುಸಿನೆಸ್ ಹೆಡ್ ತೇಜ್ಕರಣ್ ಸಿಂಗ್ ಬಜಾಜ್, “ಮನರಂಜನೆಯನ್ನು ಹೆಚ್ಚು ಪ್ರಸ್ತುತವಾಗಿ ಹಾಗೂ ಸುಲಭವಾಗಿ ಹುಡುಕುವಂತೆ ಮಾಡುವುದೇ ನಮ್ಮ ಮುಖ್ಯ ಉದ್ದೇಶ. ಏಳು ಭಾಷೆಗಳ ಪ್ರೀಮಿಯಂ ಕಂಟೆಂಟ್, ಜಾಗತಿಕ ಸಿನಿಮಾಗಳು ಹಾಗೂ ನವೀಕೃತ ‘ಫ್ರೀ 5’ ಮೂಲಕ ಪ್ರೇಕ್ಷಕರಿಗೆ ಹೆಚ್ಚಿನ ಆಯ್ಕೆ ನೀಡುತ್ತಿದ್ದೇವೆ” ಎಂದರು.
ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್‌ನ ಮುಖ್ಯ ತಂತ್ರಜ್ಞಾನ ಅಧಿಕಾರಿ (CTO) ಪ್ರಮೋದ್ ಪ್ರಕಾಶ್ ಮಾತನಾಡಿ, “ಕುಟುಂಬದ ಪ್ರತಿಯೊಂದು ತಲೆಮಾರಿನವರಿಗೂ ಅತ್ಯಂತ ಸರಳವಾಗಿ ಅರ್ಥವಾಗುವಂತೆ ಆ್ಯಪ್ ವಿನ್ಯಾಸಗೊಳಿಸಲಾಗಿದ್ದು, ತಂತ್ರಜ್ಞಾನವು ತೆರೆಮರೆಯಲ್ಲಿ ಸರಾಗವಾಗಿ ಕೆಲಸ ಮಾಡಿ ವೀಕ್ಷಕರಿಗೆ ನಿರಂತರ ಮನರಂಜನೆ ನೀಡಲಿದೆ” ಎಂದು ತಿಳಿಸಿದರು.






















