SK Home Ad
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ

7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ

0
75

ಸಂ. ಕ. ಸಮಾಚಾರ, ಮಂಗಳೂರು: ಸಾರ್ವಜನಿಕರಿಂದ ಬಂದಿರುವ ಭ್ರಷ್ಟಾಚಾರ, ಲಂಚದ ಬೇಡಿಕೆ, ಖಾತಾ ಬದಲಾವಣೆ ಹಾಗೂ ಸರ್ಕಾರಿ ಯೋಜನೆಗಳ ಅನುಷ್ಠಾನದಲ್ಲಿನ ಅಕ್ರಮದ ದೂರುಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳ 7 ಗ್ರಾಮ ಪಂಚಾಯತಿ ಕಚೇರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ಮಂಗಳೂರು ತಾಲೂಕಿನ ಪೆರ್ಮುದೆ, ಬಂಟ್ವಾಳ ತಾಲೂಕಿನ ಪುದು, ಮಾಣಿ, ಗೊಳ್ತಮಜಲು, ಪಾಣೆಮಂಗಳೂರು/ಅಡ್ಯಾರ್, ಕುವೆಟ್ಟು ಹಾಗೂ ಮಡಂತ್ಯಾರ್ ಗ್ರಾಮ ಪಂಚಾಯತಿ ಕಚೇರಿಗಳಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರವಾರ, ಉಡುಪಿ ಹಾಗೂ ಮಂಗಳೂರು ವಿಭಾಗಗಳ ಲೋಕಾಯುಕ್ತ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತಂಡಗಳನ್ನು ರಚಿಸಿ ಏಕಕಾಲಕ್ಕೆ ಪರಿಶೀಲನೆ ನಡೆಸಲಾಗಿದೆ.

ದಾಳಿಯ ವೇಳೆ ಪಂಚಾಯತಿ ಕಚೇರಿಗಳಲ್ಲಿರುವ ಪ್ರಮುಖ ಕಡತಗಳು, ಸಾರ್ವಜನಿಕರ ಅರ್ಜಿ ವಿಲೇವಾರಿ ರಿಜಿಸ್ಟರ್‌, ತೆರಿಗೆ ವಸೂಲಾತಿ ದಾಖಲೆಗಳು, ಕಟ್ಟಡ ನಿರ್ಮಾಣ ಪರವಾನಗಿ ಹಾಗೂ 15ನೇ ಹಣಕಾಸು ಯೋಜನೆಯ ಅನುದಾನ ಬಳಕೆಗೆ ಸಂಬಂಧಿಸಿದ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇದರೊಂದಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (PDO), ಕಾರ್ಯದರ್ಶಿಗಳು ಹಾಗೂ ಇತರ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿ, ಸಾರ್ವಜನಿಕರಿಂದ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ವಿವರಣೆ ಪಡೆಯಲಾಗುತ್ತಿದೆ.

ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಪೂರ್ಣಗೊಂಡ ಬಳಿಕ ಯಾವುದೇ ಅಕ್ರಮ ಅಥವಾ ಲೋಪಗಳು ಪತ್ತೆಯಾಗಿವೆಯೇ ಎಂಬುದು ಸ್ಪಷ್ಟವಾಗಲಿದೆ. ಸದ್ಯ ದಾಖಲೆಗಳ ಪರಿಶೀಲನೆ ಹಾಗೂ ವಿಚಾರಣೆ ಮುಂದುವರಿದಿದೆ.

ಪ್ರತಿ ಹೊಸ ಅಪ್‌ಡೇಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿರಿ 👉 ಇಂದಿನ ಪ್ರಮುಖ ಲೈವ್ ಅಪ್‌ಡೇಟ್‌ಗಳನ್ನು ‘ಸಂಯುಕ್ತ ಕರ್ನಾಟಕ’ ಜಾಲತಾಣದಲ್ಲಿ ನಿರಂತರವಾಗಿ ಓದಿರಿ.