‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಗಮನ ಸೆಳೆದಿದ್ದ ಗಾಯಕಿ ಈಶಾನಿ ಹಾಗೂ ಮಾಡೆಲ್ ಮೈಕಲ್ ಅಜಯ್ ಜೋಡಿಯ ಹಳೆಯ ಪ್ರೇಮ ಕಥೆಗೆ ಈಗ ಹೊಸ ತಿರುವು ಸಿಕ್ಕಿದೆ. ಈಶಾನಿ ತಮ್ಮ ಮಾತು ಮತ್ತು ಕೆಲವು ವಿಚಾರಗಳಿಂದ ಸೀಸನ್ 10ರಲ್ಲಿ ತುಂಬಾನೆ ಟ್ರೋಲ್ ಆಗಿದ್ರು. ಅಲ್ಲದೇ ಗಾಯಕಿ ಈಶಾನಿ ಶೋ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರೀತಿ, ಮದುವೆ ಹಾಗೂ ಭವಿಷ್ಯದ ಕುರಿತು ಚರ್ಚಿಸಿ ಸುದ್ದಿಯಾಗಿದ್ದ ಈ ಜೋಡಿ, ಪ್ರಸ್ತುತ ಸಂಪೂರ್ಣವಾಗಿ ದೂರವಾಗಿದ್ದಾರೆ.
ಇತ್ತೀಚೆಗೆ ನಡೆದ ತಮ್ಮ ‘ಟಾಕ್ಸಿಕ್ ಎಂಪೈರ್’ ಆಲ್ಬಂ ಸಾಂಗ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಈಶಾನಿ, ಮೈಕಲ್ ಅಜಯ್ ವಿರುದ್ಧ ಮೋಸದ ಆರೋಪ ಮಾಡಿದ್ದಾರೆ. “ಬಿಗ್ ಬಾಸ್ ಮನೆಯಲ್ಲಿದ್ದಾಗ ಮೈಕಲ್ ತೋರಿಸಿದ್ದ ಪ್ರೀತಿಯೆಲ್ಲವೂ ಬರೀ ನಾಟಕವಾಗಿತ್ತು. ಶೋಗೆ ಹೋಗುವ ಮುನ್ನವೇ ಅವರಿಗೆ ಬೇರೊಬ್ಬ ಗರ್ಲ್‌ಫ್ರೆಂಡ್ ಇದ್ದರು ಎಂಬ ಆಘಾತಕಾರಿ ಸತ್ಯ ನನಗೆ ಹೊರಬಂದ ಮೇಲಷ್ಟೇ ತಿಳಿಯಿತು” ಎಂದು ತಮ್ಮ ನೋವನ್ನು ಹೊರಹಾಕಿದ್ದಾರೆ.
ತಮ್ಮ ಸಂಬಂಧದ ಕುರಿತು ಸ್ಪಷ್ಟನೆ ನೀಡಿದ ಈಶಾನಿ, “ನಾನು ಮೈಕಲ್‌ನನ್ನು ಮನಸ್ಪೂರ್ತಿಯಾಗಿ ಇಷ್ಟಪಟ್ಟಿದ್ದೆ. ಆದ್ರೆ ಅವನ ಕಡೆಯಿಂದ ನಿಜವಾದ ಪ್ರೀತಿ ಇರಲಿಲ್ಲ. ಗೇಮ್‌ಗಾಗಿ ನನ್ನ ಭಾವನೆಗಳ ಜೊತೆ ಚೆಲ್ಲಾಟವಾಡಿ ಏಮಾರಿಸಿದ ಎಂದು ಹೇಳಿಕೊಂಡಿದ್ದಾರೆ. ಸದ್ಯ ನಾವಿಬ್ಬರೂ ಕೇವಲ ಸಾಮಾನ್ಯ ಸ್ನೇಹಿತರಾಗಿ ಮಾತ್ರ ಉಳಿದುಕೊಂಡಿದ್ದೇವೆ” ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.
ಮತ್ತೊಂದೆಡೆ, ಈಶಾನಿ ಅವರಿಂದ ದೂರವಾಗಿರುವ ಮೈಕಲ್ ಅಜಯ್ ಪ್ರಸ್ತುತ ತಮ್ಮ ಫಿಟ್ನೆಸ್ ವೃತ್ತಿಜೀವನದತ್ತ ಗಮನ ಹರಿಸಿದ್ದಾರೆ. ತಮ್ಮ ನಿಜವಾದ ಗೆಳತಿಯೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಅವರು, ನಿಯಮಿತವಾಗಿ ವೀಡಿಯೊ ಹಾಗೂ ರೀಲ್ಸ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.






















