ಬೆಂಗಳೂರು* : ರಂಗಾಯಣ ರಘು, ಪ್ರಭು ಮುಂಡ್ಕೂರ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ ಬಹುನಿರೀಕ್ಷಿತ ‘ಹೊಸ ಜೀವನ’ ಚಿತ್ರದ ಮೊದಲ ಸುಮಧುರ ಗೀತೆ “ಏನೇನೋ ಹಂಬಲ…” ಅಧಿಕೃತವಾಗಿ ಲೋಕಾರ್ಪಣೆಗೊಂಡಿದೆ. ಸ್ಯಾಂಡಲ್‌ವುಡ್‌ನ ನೆಚ್ಚಿನ ನಟ ‘ರೋರಿಂಗ್ ಸ್ಟಾರ್’ ಶ್ರೀಮುರಳಿ ಅವರು ಈ ಹಾಡನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಾಡಿನ ಬಿಡುಗಡೆ ಬಗ್ಗೆ ಸಂತಸ ಹಂಚಿಕೊಂಡಿರುವ ಚಿತ್ರತಂಡ, “ಕನಸೊಂದು ತನ್ನ ಮೊದಲ ಇಂಪಾದ ರಾಗವನ್ನು ಕಂಡುಕೊಂಡಿದೆ. ಎಷ್ಟೋ ಹೃದಯಗಳು ಜೊತೆಯಾಗಿ ಸಾಗಿದ ಈ ಸುಂದರ ಪಯಣದ ಫಲವೇ ಈ ಹಾಡು. ನಮ್ಮ ಈ ಆರಂಭದ ಭಾಗವಾಗಿದ್ದಕ್ಕಾಗಿ ಶ್ರೀಮುರಳಿ ಸರ್‌ಗೆ ಧನ್ಯವಾದಗಳು. ಸಾವಿರ ನಿರೀಕ್ಷೆಗಳೊಂದಿಗೆ ಈ ಹಾಡನ್ನು ನಿಮ್ಮ ಮುಂದೆ ತಂದಿದ್ದೇವೆ, ಕೇಳಿ ಆನಂದಿಸಿ” ಎಂದು ಭಾವನಾತ್ಮಕವಾಗಿ ತಿಳಿಸಿದೆ.
ಸ್ನೇಹ, ಪ್ರೀತಿ, ಜೀವನದ ನಿತ್ಯ ಹೋರಾಟ ಹಾಗೂ ಮೌಲ್ಯಗಳನ್ನಿಟ್ಟುಕೊಂಡು ಭಾವನಾತ್ಮಕ ಕಥಾಹಂದರವನ್ನು ಸಿದ್ಧಪಡಿಸಲಾಗಿದೆ. ಈ ಹಿಂದೆ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದ ಮೋಹನ್ ಕುಮಾರ್ ಹನುಮಯ್ಯ ಅವರು ‘ಹೊಸ ಜೀವನ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ಅರ್ಜುನ್ ಪ್ರೊಡಕ್ಷನ್ ಹಾಗೂ ಚಿರು ಪ್ರೊಡಕ್ಷನ್ ಲಾಂಛನದಲ್ಲಿ ಜಿ.ಎಸ್. ಸಂಜೀವ್ ಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಹಿರಿಯ ನಟ ರಂಗಾಯಣ ರಘು ಅವರ ಅಭಿನಯದ 400ನೇ ಮೈಲಿಗಲ್ಲಿನ ಸಿನಿಮಾ ಇದಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.
ಚಿತ್ರದಲ್ಲಿ ಪ್ರಭು ಮುಂಡ್ಕೂರ್ ಜೊತೆಗೆ ಸ್ವಾತಿ ಮುಪ್ಪಾಲ ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ಶಿವರಾಜ್ ಕೆ.ಆರ್. ಪೇಟೆ, ಸುಹಾಸ್ ಅತ್ರೆಯಸ್, ಅಭಿ ಸಾಮ್ರಾಟ್ ಹಾಗೂ ಉದಯ್ ಆಚಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. ತಾಂತ್ರಿಕವಾಗಿಯೂ ಸಿನಿಮಾ ಶ್ರೀಮಂತವಾಗಿದ್ದು, ಸುಮುಖ ರಾವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಸುನಾದ್ ಗೌತಮ್ ಅವರ ಹಿನ್ನೆಲೆ ಸಂಗೀತ, ಶಶಿಧರ್ ಗೌಡ ಅವರ ಸಂಕಲನ ಹಾಗೂ ರಾಜ್ ಕಾಂತ್ ಎಸ್ ಕೆ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರಕ್ಕೆ ಪ್ರತಾಪ್ ಎಂ.ಆರ್. ಸಂಭಾಷಣೆ ಬರೆದಿದ್ದು, ಸದ್ಯ ಬಿಡುಗಡೆಯಾಗಿರುವ ಮೆಲೋಡಿ ಹಾಡು ಕೇಳುಗರ ಗಮನ ಸೆಳೆದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.





















