ಬೆಂಗಳೂರು : ನೀಟ್ (UGNEET-2026) ಪರೀಕ್ಷೆಯಲ್ಲಿ ಅರ್ಹತೆ ಪಡೆದಿದ್ದರೂ ಇನ್ನೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಯುಜಿಸಿಇಟಿ (UGCET) ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಜಿ ಸಲ್ಲಿಸದ ಅಭ್ಯರ್ಥಿಗಳಿಗೆ ಕೆಇಎ ಮತ್ತೊಂದು ಅವಕಾಶ ಕಲ್ಪಿಸಿದೆ. ಸಾರ್ವಜನಿಕರಿಂದ ಬಂದ ಮನವಿಗಳನ್ನು ಪರಿಗಣಿಸಿ, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜುಲೈ 30, 2026ರವರೆಗೆ ವಿಸ್ತರಿಸಲಾಗಿದೆ.
ಈ ಮೊದಲು ಅರ್ಜಿ ಸಲ್ಲಿಸಲು ನಿಗದಿಯಾಗಿದ್ದ ಕೊನೆಯ ದಿನಾಂಕ ಜುಲೈ 24 ಆಗಿತ್ತು. ಆದರೆ ಅನೇಕ ವಿದ್ಯಾರ್ಥಿಗಳು ಹಾಗೂ ಪೋಷಕರು ಹೆಚ್ಚುವರಿ ಸಮಯ ನೀಡುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ಗಡುವು ವಿಸ್ತರಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಇದನ್ನೂ ಓದಿ: ʼಉಪವಾಸ ಅಂತ್ಯ, ಹೊಣೆಗಾರಿಕೆ ಆರಂಭ’ : ವಾಂಗ್‌ಚುಕ್ ಪೋಸ್ಟ್!
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಐಎಎಸ್ ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
ನೀಟ್ ಡೇಟಾ ಇನ್ನೂ KEAಗೆ ಬಂದಿಲ್ಲ : ಪ್ರಾಧಿಕಾರದ ಪ್ರಕಟಣೆಯ ಪ್ರಕಾರ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯಿಂದ (NTA) ನೀಟ್-2026 ಫಲಿತಾಂಶದ ಅಧಿಕೃತ ಡೇಟಾ ಇನ್ನೂ ಕೆಇಎಗೆ ಲಭ್ಯವಾಗಿಲ್ಲ. ಡೇಟಾ ಸ್ವೀಕರಿಸಿದ ತಕ್ಷಣ, ಅಭ್ಯರ್ಥಿಗಳಿಗೆ ತಮ್ಮ NEET Roll Number ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡುವ ಅವಕಾಶ ನೀಡಲಾಗುತ್ತದೆ.
ಅದಾದ ಬಳಿಕ ದಾಖಲೆ ಪರಿಶೀಲನೆ (Document Verification) ಪ್ರಕ್ರಿಯೆ ಆರಂಭವಾಗಲಿದ್ದು, ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆ ಮುಂದುವರಿಯಲಿದೆ.
ಇದನ್ನೂ ಓದಿ: ಪರೀಕ್ಷಾ ಅಕ್ರಮಕ್ಕೆ ತಡೆ: ಸಂಪುಟ ಸಭೆಯಲ್ಲಿ ಇಂದು ಪ್ರಮುಖ ನಿರ್ಧಾರ
ಆತಂಕ ಬೇಡ ಎಂದ KEA : ನೀಟ್ ಫಲಿತಾಂಶದ ಮಾಹಿತಿ ಇನ್ನೂ ಲಭ್ಯವಾಗದಿರುವ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಅಥವಾ ಪೋಷಕರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಕೆಇಎ ಸ್ಪಷ್ಟಪಡಿಸಿದೆ. ಮೊದಲು ಹೊಸ ಅಭ್ಯರ್ಥಿಗಳು UGCET ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬೇಕು. ನಂತರ ಪ್ರಾಧಿಕಾರದಿಂದ ಸೂಚನೆ ಬಂದಾಗ ತಮ್ಮ ನೀಟ್ ರೋಲ್ ಸಂಖ್ಯೆಯನ್ನು ಲಿಂಕ್ ಮಾಡಬಹುದು ಎಂದು ತಿಳಿಸಲಾಗಿದೆ.
ನಿಯಮಿತವಾಗಿ ವೆಬ್‌ಸೈಟ್ ಪರಿಶೀಲಿಸಿ : ಪ್ರವೇಶ ಪ್ರಕ್ರಿಯೆಯ ಮುಂದಿನ ವೇಳಾಪಟ್ಟಿ, ನೀಟ್ ರೋಲ್ ಸಂಖ್ಯೆ ಲಿಂಕ್ ಮಾಡುವ ದಿನಾಂಕ, ದಾಖಲೆ ಪರಿಶೀಲನೆ ಹಾಗೂ ಕೌನ್ಸೆಲಿಂಗ್‌ಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಅಧಿಕೃತ KEA ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಮತ್ತು ಪೋಷಕರು ಯಾವುದೇ ಗೊಂದಲಕ್ಕೆ ಒಳಗಾಗದೆ, ನಿಯಮಿತವಾಗಿ KEA ಅಧಿಕೃತ ವೆಬ್‌ಸೈಟ್ ಪರಿಶೀಲಿಸುವಂತೆ ಪ್ರಾಧಿಕಾರ ಸೂಚಿಸಿದೆ.
ಇದನ್ನೂ ಓದಿ: ‘ಮನ್ ಕಿ ಬಾತ್’ ಬಿಟ್ಟು ಸಂಸತ್ತಿನಲ್ಲಿ ಚರ್ಚಿಸಿ: ಪ್ರಧಾನಿಗೆ ಖರ್ಗೆ ಪಟ್ಟು!
KEA ಈ ನಿರ್ಧಾರದಿಂದ ಅರ್ಜಿ ಸಲ್ಲಿಸಲು ಸಾಧ್ಯವಾಗದ ಅನೇಕ ನೀಟ್ ಅರ್ಹ ಅಭ್ಯರ್ಥಿಗಳಿಗೆ ಮತ್ತೊಂದು ಅವಕಾಶ ದೊರೆತಿದ್ದು, ರಾಜ್ಯದ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇತರೆ ಆರೋಗ್ಯ ವಿಜ್ಞಾನ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಗೆ ನೆರವಾಗಲಿದೆ.






















