ಏಷ್ಯಾ ಕಪ್‌ನಲ್ಲಿ ಭಾರತದ ಪ್ರಾಬಲ್ಯ; ಪುರುಷರ ತಂಡ ಚಾಂಪಿಯನ್, ಮಹಿಳೆಯರಿಗೆ ಮೂರನೇ ಸ್ಥಾನ
ನವದೆಹಲಿ/ (ಜಪಾನ್): 2026ರ U-18 ಏಷ್ಯಾ ಕಪ್ ಹಾಕಿ ಟೂರ್ನಿಯಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದ್ದು, ಪುರುಷರ ತಂಡ ಚಿನ್ನದ ಪದಕ ಗೆದ್ದರೆ, ಮಹಿಳಾ ತಂಡ ಕಂಚಿನ ಪದಕ ತನ್ನದಾಗಿಸಿಕೊಂಡಿದೆ. ಜೂನಿಯರ್ ಮಟ್ಟದಲ್ಲಿ ಭಾರತದ ಹಾಕಿ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಈ ಸಾಧನೆಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ಮಹಿಳಾ ತಂಡವು ಕಂಚಿನ ಪದಕದ ಪಂದ್ಯದಲ್ಲಿ ಕೊರಿಯಾ ವಿರುದ್ಧ 3-0 ಅಂತರದ ಭರ್ಜರಿ ಜಯ ಸಾಧಿಸಿದರೆ, ಪುರುಷರ ತಂಡ ಫೈನಲ್‌ನಲ್ಲಿ ಆತಿಥೇಯ ಜಪಾನ್ ತಂಡವನ್ನು 4-1 ಅಂತರದಿಂದ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದನ್ನೂ ಓದಿ: ನಾರ್ವೆ ಚೆಸ್ ಪ್ರಶಸ್ತಿ ಗೆದ್ದ ಮೊದಲ ಭಾರತೀಯ: ಪ್ರಜ್ಞಾನಂದ ಹೊಸ ದಾಖಲೆ
ಮಹಿಳಾ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ : ಭಾರತದ ಮಹಿಳಾ U-18 ತಂಡದ ಸಾಧನೆಯನ್ನು ಶ್ಲಾಘಿಸಿರುವ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನಾ ಸಂದೇಶ ಪ್ರಕಟಿಸಿದ್ದಾರೆ. ಟೂರ್ನಿಯುದ್ದಕ್ಕೂ ತಂಡವು ತೋರಿದ ಧೈರ್ಯ, ಹೋರಾಟದ ಮನೋಭಾವ ಮತ್ತು ಸಾಮರ್ಥ್ಯವನ್ನು ಕೊಂಡಾಡಿರುವ ಪ್ರಧಾನಿ, ಈ ಸಾಧನೆ ಭಾರತದಲ್ಲಿ ಮಹಿಳಾ ಹಾಕಿಯ ಬೆಳೆಯುತ್ತಿರುವ ಶಕ್ತಿ ಮತ್ತು ಯುವ ಆಟಗಾರ್ತಿಯರ ಅಪಾರ ಪ್ರತಿಭೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.
ಕೊರಿಯಾ ವಿರುದ್ಧ ಏಕಪಕ್ಷೀಯ ಗೆಲುವು : ಕಂಚಿನ ಪದಕದ ಪಂದ್ಯದಲ್ಲಿ ಭಾರತ ಆರಂಭದಿಂದಲೇ ಮೇಲುಗೈ ಸಾಧಿಸಿತು. ಎರಡನೇ ನಿಮಿಷದಲ್ಲೇ ಸಂದೀಪ್ ಕುಮಾರಿ ಗೋಲು ಗಳಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. 16ನೇ ನಿಮಿಷದಲ್ಲಿ ನಾಯಕಿ ಸ್ವೀಟಿ ಕುಜುರ್ ಮತ್ತೊಂದು ಗೋಲು ದಾಖಲಿಸಿ ಮುನ್ನಡೆಯನ್ನು 2-0ಕ್ಕೆ ಹೆಚ್ಚಿಸಿದರು. ವಿರಾಮದ ಬಳಿಕವೂ ದಾಳಿಯನ್ನು ಮುಂದುವರಿಸಿದ ಭಾರತ 33ನೇ ನಿಮಿಷದಲ್ಲಿ ನೌಶೀನ್ ನಾಜ್ ಗೋಲು ಮೂಲಕ 3-0 ಅಂತರದ ಭದ್ರ ಮುನ್ನಡೆ ಸಾಧಿಸಿತು.
ಇದನ್ನೂ ಓದಿ: ಸದ್ಯದಲ್ಲೇ ರಕ್ಷಿತ್ ಶೆಟ್ಟಿ ದರ್ಶನ : BIG ಅಪ್ಡೇಟ್ ಕೊಟ್ಟ ರಿಷಬ್ ಶೆಟ್ಟಿ
ಭಾರತದ ರಕ್ಷಣಾ ವಿಭಾಗವು ಕೊರಿಯಾ ತಂಡಕ್ಕೆ ಯಾವುದೇ ಅವಕಾಶ ನೀಡದೆ ಕ್ಲೀನ್‌ಶೀಟ್‌ನೊಂದಿಗೆ ಪಂದ್ಯ ಮುಗಿಸಿತು.
ನೌಶೀನ್ ನಾಜ್ ಟೂರ್ನಿಯ ಟಾಪ್ ಸ್ಕೋರರ್: ಕಂಚಿನ ಪದಕದ ಪಂದ್ಯದಲ್ಲಿ ಗೋಲು ದಾಖಲಿಸಿದ ನೌಶೀನ್ ನಾಜ್, ಒಟ್ಟು 12 ಗೋಲುಗಳೊಂದಿಗೆ ಟೂರ್ನಿಯ ಪ್ರಮುಖ ಗೋಲು ಸ್ಕೋರರ್‌ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದರು. ಪಂದ್ಯದಲ್ಲಿ ಆರಂಭಿಕ ಗೋಲು ಗಳಿಸಿ ತಂಡದ ಗೆಲುವಿಗೆ ಭದ್ರ ಅಡಿಪಾಯ ಹಾಕಿದ ಸಂದೀಪ್ ಕುಮಾರಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.
ಸೆಮಿಫೈನಲ್ ನಿರಾಸೆಯಿಂದ ಚೇತರಿಸಿಕೊಂಡ ಭಾರತ: ಮಹಿಳಾ ತಂಡ ಸೆಮಿಫೈನಲ್‌ನಲ್ಲಿ ಚೀನಾ ವಿರುದ್ಧ ಶೂಟೌಟ್‌ನಲ್ಲಿ ಸೋತು ಫೈನಲ್ ಅವಕಾಶ ಕಳೆದುಕೊಂಡಿತ್ತು. ಆದರೆ ನಿರಾಸೆಯಿಂದ ಹೊರಬಂದು ಕಂಚಿನ ಪದಕದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಟೂರ್ನಿಯನ್ನು ಯಶಸ್ವಿಯಾಗಿ ಮುಗಿಸಿತು.
ಇದನ್ನೂ ಓದಿ: ಶಿಕ್ಷಣ ಸಚಿವರ ವಿರುದ್ಧ ಜಂತರ್ ಮಂತರ್‌ನಲ್ಲಿ CJP ಭಾರೀ ಪ್ರತಿಭಟನೆ
ಪುರುಷರ ತಂಡ ಚಾಂಪಿಯನ್ : ಇನ್ನೊಂದೆಡೆ ಜಪಾನ್‌ನ ಕಾಕಮಿಗಹರಾದಲ್ಲಿ ನಡೆದ ಪುರುಷರ U-18 ಏಷ್ಯಾ ಕಪ್ ಫೈನಲ್‌ನಲ್ಲಿ ಭಾರತ ಆತಿಥೇಯ ಜಪಾನ್ ತಂಡವನ್ನು 4-1 ಅಂತರದಿಂದ ಸೋಲಿಸಿ ಚಿನ್ನದ ಪದಕ ಗೆದ್ದಿತು. ಭಾರತದ ಪರ ಆಶಿಶ್ ತಾನಿ ಪೂರ್ಣಿ 2ನೇ, 28ನೇ ಹಾಗೂ 34ನೇ ನಿಮಿಷಗಳಲ್ಲಿ ಗೋಲು ಗಳಿಸಿ ಹ್ಯಾಟ್ರಿಕ್ ಸಾಧನೆ ಮಾಡಿದರು. ನಾಯಕ ಕೇತನ್ ಕುಶ್ವಾಹ 30ನೇ ನಿಮಿಷದಲ್ಲಿ ಗೋಲು ದಾಖಲಿಸಿ ತಂಡದ ಗೆಲುವಿಗೆ ಕೊಡುಗೆ ನೀಡಿದರು. ಜಪಾನ್ ಪರ ನುಮಾಡಾ ಗಕು 52ನೇ ನಿಮಿಷದಲ್ಲಿ ಏಕೈಕ ಗೋಲು ಗಳಿಸಿದರು.
ಆಶಿಶ್ ತಾನಿ ಪೂರ್ಣಿ ಮಿಂಚು : ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ ಆಶಿಶ್ ತಾನಿ ಪೂರ್ಣಿ ಒಟ್ಟು 13 ಗೋಲುಗಳೊಂದಿಗೆ ಸ್ಪರ್ಧೆಯ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಫೈನಲ್‌ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಅವರ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿಯೂ ಲಭಿಸಿತು.
ಇದನ್ನೂ ಓದಿ: ಕುನೋ ಕಾಡಿಗೆ ಮರಳಿದ ಅಪರೂಪದ ಅತಿಥಿ ಕಾಡು ಬೆಕ್ಕು (ಕ್ಯಾರಕಲ್)
ಪುರಷರ ತಂಡಕ್ಕೆ ಪ್ರಧಾನಿ ಮೋದಿ ಅಭಿನಂದನೆ : ನಮ್ಮ ಯುವ ಹಾಕಿ ಆಟಗಾರರ ಅದ್ಭುತ ಸಾಧನೆ! 2026 ರ ಪುರುಷರ U18 ಏಷ್ಯಾ ಕಪ್ ಗೆದ್ದ ಭಾರತೀಯ ಪುರುಷರ U18 ಹಾಕಿ ತಂಡಕ್ಕೆ ಅಭಿನಂದನೆಗಳು. ತಂಡವು ಪಂದ್ಯಾವಳಿಯಾದ್ಯಂತ ಅಸಾಧಾರಣ ಕೌಶಲ್ಯ ಮತ್ತು ತಂಡದ ಕೆಲಸವನ್ನು ಪ್ರದರ್ಶಿಸಿತು, ಫೈನಲ್‌ನಲ್ಲಿ ಸ್ಮರಣೀಯ ಜಯ ಸಾಧಿಸಿತು. ಈ ಗೆಲುವು ನಮ್ಮ ಯುವಕರಲ್ಲಿ ಹಾಕಿಯ ಹೆಚ್ಚುತ್ತಿರುವ ಜನಪ್ರಿಯತೆಯನ್ನು ಪ್ರತಿಬಿಂಬಿಸುತ್ತದೆ. ತಂಡದ ಭವಿಷ್ಯದ ಪ್ರಯತ್ನಗಳಿಗಾಗಿ ನನ್ನ ಶುಭಾಶಯಗಳು ಎಂದಿದ್ದಾರೆ.
ಆಟಗಾರರಿಗೆ ನಗದು ಬಹುಮಾನ ಘೋಷಣೆ: ಎರಡೂ ತಂಡಗಳ ಸಾಧನೆಯನ್ನು ಗೌರವಿಸಿ ಹಾಕಿ ಇಂಡಿಯಾ ನಗದು ಬಹುಮಾನ ಘೋಷಿಸಿದೆ. ಪುರುಷರ U-18 ತಂಡದ ಪ್ರತಿಯೊಬ್ಬ ಆಟಗಾರರಿಗೆ ₹3 ಲಕ್ಷ, ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ₹1.5 ಲಕ್ಷ, ಮಹಿಳಾ U-18 ತಂಡದ ಪ್ರತಿಯೊಬ್ಬ ಆಟಗಾರ್ತಿಗೆ ₹1 ಲಕ್ಷ, ಸಹಾಯಕ ಸಿಬ್ಬಂದಿಯ ಪ್ರತಿಯೊಬ್ಬ ಸದಸ್ಯರಿಗೆ ₹50,000 ನಗದು ಬಹುಮಾನ ಘೋಷಿಸಲಾಗಿದೆ.
ಭವಿಷ್ಯದ ತಾರೆಯರತ್ತ ದೇಶದ ಗಮನ : ಜೂನಿಯರ್ ಮಟ್ಟದಲ್ಲಿ ಭಾರತ ಪುರುಷ ಮತ್ತು ಮಹಿಳಾ ತಂಡಗಳ ಸಾಧನೆ ದೇಶದ ಹಾಕಿ ಭವಿಷ್ಯದ ಬಗ್ಗೆ ಹೊಸ ಭರವಸೆ ಮೂಡಿಸಿದೆ. ಈ ತಂಡಗಳ ಹಲವು ಆಟಗಾರರು ಮುಂದಿನ ದಿನಗಳಲ್ಲಿ ಹಿರಿಯ ರಾಷ್ಟ್ರೀಯ ತಂಡದ ಪ್ರಮುಖ ಆಧಾರಸ್ತಂಭಗಳಾಗುವ ನಿರೀಕ್ಷೆ ವ್ಯಕ್ತವಾಗಿದೆ.






















