ತಾರಾತಿಗಡಿ: ಏಳನೇ ತರಗತಿಯಲ್ಲಿದ್ದಾಗಲೇ ತಿಗಡೇಸಿ ಚುನಾವಣಾ ಅಭ್ಯರ್ಥಿಗಳ ಪರವಾಗಿ ಘೋಷಣೆ ಕೂಗುವುದನ್ನು ಕರಗತ ಮಾಡಿಕೊಂಡಿದ್ದ. ಯಾವುದೇ ಚುನಾವಣೆ ಇರಲಿ ತಾನು ಸಪೋರ್ಟ್ ಮಾಡುವ ಅಭ್ಯರ್ಥಿಗಳ ಪರವಾಗಿ ಮೈಕಿನಲ್ಲಿ ಚೀರುಧ್ವನಿಯಿಂದ ಘೋಷಣೆಗಳನ್ನು ಕೂಗುತ್ತ ಪ್ರಚಾರ ಮಾಡುತ್ತಿದ್ದ.
ಕಾಕತಾಳೀಯವೋ ಏನೋ ಗೊತ್ತಿಲ್ಲ ಆ ಅಭ್ಯರ್ಥಿಗಳು ಗೆಲ್ಲುತ್ತಿದ್ದರು. ಗೆದ್ದ ಅಭ್ಯರ್ಥಿಯ ಅಭಿನಂದನಾ ಸಮಾರಂಭದಲ್ಲಿ ತಿಗಡೇಸಿಗೂ ಹೂ ಹಾರ ಹಾಕುತ್ತಿದ್ದರು. ಮಾಡಿದರೆ ರಾಜಕಾರಣ ಮಾಡಬೇಕು…ಅದರಲ್ಲಿಯೇ ಯಶಸ್ಸು ಸಾಧಿಸಬೇಕು ಎಂದು ಪಣತೊಟ್ಟಿದ್ದ. ಎಸ್‌ಎಸ್‌ಎಲ್‌ಸಿ ಫೇಲಾದ ಮೇಲೆ ಓದಿನ ಕಡೆ ತಲೆ ಹಾಕಿ ಮಲಗುವುದನ್ನೆ ಬಿಟ್ಟ.
ಗ್ರಾಮ ಪಂಚಾಯ್ತಿ, ತಾಲೂಕಾ ಪಂಚಾಯ್ತಿಗೆ ಅಡ್ಡಾಡುತ್ತಿದ್ದ. ಅವರಿವರ ಕೆಲಸ ಮಾಡಿಸಿಕೊಡುತ್ತಿದ್ದ. ಜನರೆಲ್ಲರೂ ತಿಗಡೇಸಿಯನ್ನೇ ಎಂಎಲ್‌ಎ ಎಂದು ಕರೆಯುತ್ತಿದ್ದರು. ಜನರು ಹಾಗೆ ಕರೆದಾಗಲೆಲ್ಲ ಖುಷಿಯಿಂದ ಬೀಗುತ್ತಿದ್ದ.
ಅವನ ಖಾಸಾ ದೋಸ್ತರಾದ ತಳವಾರ್ಕಂಟಿ, ಕನ್ನಾಳಲ್ಲ, ಲಾದುಂಚಿ ರಾಜ ಮುಂತಾದವರು, ನೀನು ಚುನಾವಣೆಗೆ ನಿಲ್ಲು, ಎಷ್ಟೂ ಅಂತ ಗೆದ್ದವರ ಸೇವೆ ಮಾಡಿಕೊಂಡು ತಿರುಗುತ್ತೀಯ ನಿನಗೆ ಒಳ್ಳೆಯ ಭವಿಷ್ಯವಿದೆ ಎಂದು ಅನ್ನತೊಡಗಿದರು.
ಆಗಲೇ ಗ್ರಾಮಪಂಚಾಯ್ತಿ ಚುನಾವಣೆ ಘೋಷಣೆ ಆದವು. ಎಲ್ಲರೂ ಸಪೋರ್ಟ್ ಮಾಡಿದ್ದರಿಂದ ಚುನಾವಣೆಗೆ ನಿಂತ. ತನ್ನ ಓಟು ಬಿಟ್ಟರೆ ಮತ್ಯಾರೂ ಆತನಿಗೆ ಓಟು ಹಾಕಿರಲಿಲ್ಲ. ಈತನ ಎದುರಿಗೆ ಸ್ಪರ್ಧಿಸಿದ್ದ ಸರಾಯಿ ಸಂಗವ್ವನ ಮಗ ಭರ್ಜರಿಯಾಗಿ ಗೆಲುವು ಸಾಧಿಸಿದ್ದ. ಆದರೂ ಆತ ಎದೆಗುಂದಲಿಲ್ಲ.
ಆತನ ಖಾಸಾ ದೋಸ್ತರು… ಇದರಲ್ಲೇನೋ ಮೋಸ ನಡೆದಿದೆ.. ಮೇಲಿನ ಚುನಾವಣೆಯಲ್ಲಿಯೇ ಮತಕಳವು ಮಾಡುತ್ತಾರೆ ಅಂದರೆ…ಇಲ್ಲಿ ಅಸಾಧ್ಯವೇ? ನಿನಗೆ ಬಿದ್ದ ಮತಗಳನ್ನು ಕದ್ದಿದ್ದಾರೆ ಎಂದು ಹೇಳಿದರು. ಮರುಬಾರಿ ಮತ್ತೆ ನಿಂತ..ಮತ್ತೆ ಅದೇ ಹಾಡಾಯಿತು..ಸೊಸೈಟಿ ಚುನಾವಣೆಗೆ ನಿಂತ ಅಲ್ಲಿಯೂ ಸೋತ.
ತಾಪಂ ಜಿಪಂ ಹೀಗೆ ಯಾವ ಚುನಾವಣೆ ಬಿಡದೇ ಎಲ್ಲದಕ್ಕೂ ಸ್ಪರ್ಧೆ ಮಾಡಿ ಸೋತ.. ಅಷ್ಟರಲ್ಲಾಗಲೇ ಇದ್ದ ಎರಡೆಕರೆ ಹೊಲ ಮಾರಿಕೊಂಡಿದ್ದ. ಮನೆಯಿಂದ ಹೊರಗೆ ಹಾಕಿದರು. ಇನ್ನು ಜೀವನ ಇದ್ದು ಏನು ಪ್ರಯೋಜನ ಎಂದು ಊರಿನ ಹಳ್ಳಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಬಿಡೋಣ ಎಂದು ಹೊರಟಿದ್ದ…
ಎದುರಿಗೆ ಎಂಎಲ್ ಎ ಕಾರು ಬಂತು. ಐ… ನನ್ನ ಚುನಾವಣೆಗೆ ಘೋಷಣೆ ಕೂಗಿದವನು ಇವನಲ್ಲವೇ? ಎಂದು ಎಂಎಲ್‌ಎ ಕಾರು ನಿಲ್ಲಿಸಿ ಆತನನ್ನು ಹತ್ತಿರ ಕರೆದು…ಏನ್ ತಿಗಡೇಸಾ ಎಲ್ಲೆ ಹೊಂಟಿದ್ದಂಗೆ ಇದೆ ಅಂದಾಗ…ಸಾಹೇಬರೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂದು ಹಳ್ಳದ ಕಡೆ ಹೊರಟಿದ್ದೆ ಅಂದ…
ಎಂಎಲ್ ಎಗೆ ಬಹಳ ಬೇಸರವಾಗಿ ಬೇಡ ತಿಗಡೇಸಿ..ಬೇಡ…ಬೇಕಾದರೆ ಮುಂದಿನ ಗ್ರಾಪಂ ಚುನಾವಣೆಯಲ್ಲಿ ನಾನು ನಿನಗೆ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ…ನಾನೇ ಚುನಾವಣೆ ಸಲುವಾಗಿ ಬೇಸತ್ತು ಸಾಯಬೇಕು ಎಂದು ಹೊರಟಿದ್ದೆ ಎಂದು ಆತನಿಗೆ ಹೇಳಿದ್ದೇ ಅಲ್ಲಿಂದ ಓಡೋಡಿ ಹೋದ ತಿಗಡೇಸಿ.























