ದುಬೈ: ಟೀಮ್ ಇಂಡಿಯಾ ಏಷ್ಯಾಕಪ್ ಚಾಂಪಿಯನ್ ಆಗಿ ಒಂದು ತಿಂಗಳಿಗಿಂತ ಹೆಚ್ಚು ಸಮಯ ಕಳೆದಿದೆ. ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಬಗ್ಗುಬಡಿದು 9ನೇ ಬಾರಿಗೆ ಏಷ್ಯಾ ಕಿರೀಟವನ್ನು ಮುಡಿಗೇರಿಸಿಕೊಂಡ ಸಂಭ್ರಮ ಇನ್ನೂ ಮಾಸಿಲ್ಲ.
ಆದರೆ, ಈ ವಿಜಯದ ನಡುವೆಯೂ ಒಂದು ವಿಚಿತ್ರ ಮತ್ತು ಗಂಭೀರ ವಿವಾದ ತಂಡವನ್ನು ಸುತ್ತಿಕೊಂಡಿದೆ. ಗೆದ್ದ ಆಟಗಾರರ ಕೈಯಲ್ಲಿರಬೇಕಾದ ಹೊಳೆಯುವ ಟ್ರೋಫಿ, ಬರೋಬ್ಬರಿ 34 ದಿನಗಳ ನಂತರವೂ ಭಾರತಕ್ಕೆ ತಲುಪಿಲ್ಲ!
ಏಷ್ಯಾಕಪ್ ಫೈನಲ್ ಪಂದ್ಯ ಮುಗಿದ ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಈ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಭಾರತ ಮತ್ತು ಪಾಕಿಸ್ತಾನದ ನಡುವಿನ ರಾಜಕೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ, ಟೀಮ್ ಇಂಡಿಯಾದ ನಾಯಕ ಸೂರ್ಯಕುಮಾರ್ ಯಾದವ್ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ನಿರಾಕರಿಸಿದರು.
ಇದಕ್ಕೆ ಮುಖ್ಯ ಕಾರಣ, ಮೊಹ್ಸಿನ್ ನಖ್ವಿ ಕೇವಲ ಎಸಿಸಿ ಅಧ್ಯಕ್ಷರಾಗಿರದೆ, ಪಾಕಿಸ್ತಾನ ಸರ್ಕಾರದ ಆಂತರಿಕ ವ್ಯವಹಾರಗಳ ಸಚಿವರೂ ಆಗಿರುವುದು. ಭಾರತದ ನಾಯಕ ತನ್ನಿಂದ ಟ್ರೋಫಿ ಸ್ವೀಕರಿಸುವುದಿಲ್ಲ ಎಂದು ಖಚಿತವಾಗಿ ಹೇಳಿದ್ದರು.
ನಖ್ವಿ ಟ್ರೋಫಿ ಮತ್ತು ವಿಜೇತರ ಪದಕಗಳನ್ನು ಆಟಗಾರರಿದ್ದ ಹೋಟೆಲ್‌ಗೆ ಕಳುಹಿಸಲು ಸೂಚಿಸಿದರು. ಇದರಿಂದಾಗಿ, ಚಾಂಪಿಯನ್ ಪಟ್ಟಕ್ಕೇರಿದ ಭಾರತೀಯ ಆಟಗಾರರು ಟ್ರೋಫಿ ಇಲ್ಲದೆಯೇ ಮೈದಾನದಲ್ಲಿ ಸಂಭ್ರಮಿಸಬೇಕಾದ ವಿಚಿತ್ರ ಸನ್ನಿವೇಶ ನಿರ್ಮಾಣವಾಯಿತು.
ಬಿಸಿಸಿಐನಿಂದ ಕಠಿಣ ಎಚ್ಚರಿಕೆ: ಈ ಘಟನೆಯ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಹಲವು ಬಾರಿ ಎಸಿಸಿಗೆ ಪತ್ರ ಬರೆದು ಟ್ರೋಫಿಯನ್ನು ಹಿಂದಿರುಗಿಸುವಂತೆ ಮನವಿ ಮಾಡಿದೆ. ಆದರೆ, ಮೊಹ್ಸಿನ್ ನಖ್ವಿ ಕಡೆಯಿಂದ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ. ಬದಲಾಗಿ, “ಟ್ರೋಫಿ ಬೇಕಿದ್ದರೆ ಸೂರ್ಯಕುಮಾರ್ ಯಾದವ್ ಅವರೇ ಬಂದು ತೆಗೆದುಕೊಂಡು ಹೋಗಲಿ,” ಎಂಬಂತಹ ಮಾತುಗಳನ್ನು ಆಡಿದ್ದಾರೆ ಎಂದು ವರದಿಯಾಗಿದೆ.
ಈ ಹಗ್ಗಜಗ್ಗಾಟದಿಂದ ಬೇಸತ್ತಿರುವ ಬಿಸಿಸಿಐ ಇದೀಗ ಕಠಿಣ ನಿಲುವು ತಳೆದಿದೆ. ಈ ಕುರಿತು ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಒಂದು ತಿಂಗಳು ಕಳೆದರೂ ಟ್ರೋಫಿ ನೀಡದಿರುವುದು ನಮಗೆ ಅಸಮಾಧಾನ ತಂದಿದೆ.
ಇನ್ನು ಮೂರು ದಿನಗಳಲ್ಲಿ ಟ್ರೋಫಿ ಮುಂಬೈನಲ್ಲಿರುವ ಬಿಸಿಸಿಐ ಮುಖ್ಯ ಕಚೇರಿ ತಲುಪದಿದ್ದರೆ, ನವೆಂಬರ್ 4 ರಂದು ದುಬೈನಲ್ಲಿ ಆರಂಭವಾಗಲಿರುವ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಸಭೆಯಲ್ಲಿ ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪ್ರಸ್ತಾಪಿಸಲಾಗುವುದು, ಎಂದು ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.
ಮೈದಾನದಲ್ಲಿ ಪಾಕಿಸ್ತಾನವನ್ನು ಸೋಲಿಸಿ ಗೆದ್ದ ಟ್ರೋಫಿ, ಇದೀಗ ರಾಜಕೀಯ ಜಟಾಪಟಿಯಲ್ಲಿ ಸಿಲುಕಿಕೊಂಡಿದೆ. ಐಸಿಸಿ ಸಭೆಗೂ ಮುನ್ನ ಟ್ರೋಫಿ ಮುಂಬೈ ತಲುಪುವುದೇ ಅಥವಾ ಈ ವಿವಾದ ಮತ್ತಷ್ಟು ದೊಡ್ಡ ತಿರುವು ಪಡೆದುಕೊಳ್ಳುವುದೇ ಎಂಬುದನ್ನು ಕಾದು ನೋಡಬೇಕಿದೆ.


























