ನ್ಯೂಯಾರ್ಕ್: ಎಂಟನೇ ಶ್ರೇಯಾಂಕಿತೆ ಅಮೆರಿಕದ ಅಮಂಡಾ ಅನಿಸಿಮೋವಾ, 11ನೇ ಸೀಡ್ ಕರೊಲಿನಾ ಮುಚೋವಾ ಹಾಗೂ 23ನೇ ಕ್ರಮಾಂಕದ ಜಪಾನಿನ ನಾವೊಮಿ ಒಸಾಕಾ ಇಲ್ಲಿ ನಡೆದಿರುವ ಪ್ರತಿಷ್ಠಿತ ಯು.ಎಸ್. ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿದ್ದಾರೆ.
ಅಂತಿಮ ಹದಿನಾರರ ಹಂತದ ಪಂದ್ಯಗಳಲ್ಲಿ ಅನಿಸಿಮೋವಾ ಬ್ರಾಜಿಲ್‌ನ ಬ್ಯಾತ್ರಿಜ್ ಅದಾಜ್ ಮಾಯಾ ಅವರನ್ನು ಹೆಚ್ಚಿನ ಬೆವರಿಳಿಸದೇ 6-0, 6-3 ರಿಂದ ಹಣಿದರೆ, ನಾವೊಮಿ ಒಸಾಕಾ ಮೂರನೇ ಶ್ರೇಯಾಂಕ ಪಡೆದಿದ್ದ ಅಮೇರಿಕದ ಕೊಕೊ ಗಾಫ್‌ರನ್ನು 6-3, 6-2 ರಿಂದ ಪರಾಭವಗೊಳಿಸಿ ಅನಿರೀಕ್ಷಿತ ಫಲಿತಾಂಶವೊದಗಿಸುವುದರೊಂದಿಗೆ 2021ರ ನಂತರ ಮೊಟ್ಟ ಮೊದಲ ಬಾರಿಗೆ ಗ್ರ್ಯಾನ್ ಸ್ಲಾಮ್‌ವೊಂದರ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ ಸಾಧನೆಗೈದರು.
ಇನ್ನೊಂದು ಪ್ರಿ-ಕ್ವಾಟರ್ಸ್‌ನಲ್ಲಿ ಎರಡು ಸಲ ಯುಎಸ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದ ಜೆಕ್ ಆಟಗಾರ್ತಿ ಕರೊಲಿನಾ ಮುಚೋವಾ, 27ನೇ ಸೀಡ್ ಉಕ್ರೇನಿನ ಮಾರ್ತಾ ಕೊಸ್ತ್ಯುಕ್ ಅವರನ್ನು ಮೂರು ಸೆಟ್‌ಗಳ ಸೆಣಸಾಟದಲ್ಲಿ 6-3, 6-7(0), 6-3 ರಿಂದ ಸೋಲಿಸಿ ಅಂತಿಮ ಎಂಟರ ಹಂತಕ್ಕೆ ಲಗ್ಗೆಯಿಟ್ಟರು.
2019ರಲ್ಲಿ ಫ್ರೆಂಚ್ ಓಪನ್ ಸೆಮಿಫೈನಲ್ ಪ್ರವೇಶಿಸಿದ್ದ ಅನಿಸಿಮೋವಾ ಇಲ್ಲಿ ಬ್ಯಾತ್ರಿಜ್ ಅದಾಜ್ ಮಾಯಾ ಎದುರಿನ ಗೆಲುವಿನೊಂದಿಗೆ ತಮ್ಮ ಗ್ರ್ಯಾನ್ ಸ್ಲಾಮ್ ಸಾಧನೆಯನ್ನು 42-22ಕ್ಕೇರಿಸಿಕೊಂಡರು. ಅವರೀಗ ಸೆಮಿಫೈನಲ್ ಸ್ಥಾನಕ್ಕಾಗಿ ಎರಡನೇ ಸೀಡ್ ಹೊಂದಿರುವ ಪೋಲೆಂಡಿನ ಇಗಾ ಶ್ವಾಂಟೆಕ್‌ರ ಸವಾಲನ್ನೆದುರಿಸಲಿದ್ದಾರೆ. ಇದು ಅನಿಸಿಮೋವಾ-ಶ್ವಾಂಟೆಕ್ ನಡುವಿನ ಕೇವಲ ಎರಡನೇ ಮುಖಾಮುಖಿಯಾಗಿರಲಿದ್ದು, ಈ ಹಿಂದೆ ವಿಂಬಲ್ಡನ್ ಕ್ವಾರ್ಟರ್‌ಫೈನಲ್‌ನಲ್ಲಿ ಶ್ವಾಂಟೆಕ್ ಅವರೇ ಜಯಿಸಿದ್ದರು.
ನಾಲ್ಕು ಸಲ ಗ್ರ್ಯಾನ್ ಸ್ಲಾಮ್ ಜಯಿಸಿರುವ ಒಸಾಕಾ, ಕ್ವಾರ್ಟರ್‌ಫೈನಲ್‌ನಲ್ಲಿ ಕರೊಲಿನಾ ಮುಚೋವಾ ಅವರನ್ನು ಎದುರಿಸಲಿದ್ದು, ಈ ಹಿಂದೆ ಗ್ರ್ಯಾನ್ ಸ್ಲಾಮ್‌ಗಳಲ್ಲಿ ಅಂತಿಮ ಎಂಟರ ಹಂತ ಪ್ರವೇಶಿಸಿದ ಪ್ರತಿ ಸಲವೂ ಒಸಾಕಾ ಅವರೇ ಜಯಶಾಲಿಯಾಗಿ ಹೊರಹೊಮ್ಮಿರುವುದೊಂದು ವಿಶೇಷ.
ವಿಲಿಯಮ್ಸ್ ಜೋಡಿಯ ಗೆಲುವಿನ ನಾಗಾಲೋಟ: ಮಹಿಳೆಯರ ಡಬಲ್ಸ್ ಪಂದ್ಯಗಳಲ್ಲಿ ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಿರುವ ವೀನಸ್ ವಿಲಿಯಮ್ಸ್-ಲೇಯ್ಲಾ ಫರ್ನಾಂಡಿಸ್‌ರ ಜೋಡಿ 12ನೇ ಶ್ರೇಯಾಂಕಿತ ಎಕಟೆರಿನಾ ಅಲೆಕ್ಸಾಂಡ್ರೋವಾ-ಝಾಂಗ್ ಶುವಾಯ್ ಜೋಡಿಯನ್ನು 6-3, 6-4 ರಿಂದ ಸೋಲಿಸಿ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದು, ಅಲ್ಲಿ ಅಗ್ರ ಶ್ರೇಯಾಂಕ ಹೊಂದಿರುವ ಕೆಟರಿನಾ ಸಿನಿಯಾಕೋವಾ-ಟೇಲರ್ ಟೌನ್ಸೆಂಡ್ ಜೋಡಿಯನ್ನು ಎದುರಿಸಲಿದೆ.