ಬೆಂಗಳೂರಿಂದಲೇ RCB ಔಟ್? ಪುಣೆ ಆಗಲಿದೆಯೇ ಹೊಸ ಹೋಮ್ ಗ್ರೌಂಡ್?

0
14

ಬೆಂಗಳೂರು: ಬರೋಬ್ಬರಿ 17 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ 2025ರ ಐಪಿಎಲ್ ಟ್ರೋಫಿ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸಂಭ್ರಮಕ್ಕೆ ಕಾಲ್ತುಳಿತ ದುರಂತದ ಕರಾಳ ಛಾಯೆ ಆವರಿಸಿತ್ತು. ಆ ದುರಂತದ ಗಾಯ ಮಾಸುವ ಮುನ್ನವೇ, ಆರ್‌ಸಿಬಿ ಅಭಿಮಾನಿಗಳ ಎದೆಗೆ ಮತ್ತೊಂದು ಬರಸಿಡಿಲು ಬಡಿದಂತಹ ಸುದ್ದಿ ಕೇಳಿಬರುತ್ತಿದೆ.

ಭದ್ರತಾ ಕಾರಣಗಳಿಂದಾಗಿ, ಮುಂಬರುವ ಐಪಿಎಲ್ ಆವೃತ್ತಿಯ ಪಂದ್ಯಗಳನ್ನು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಅನುಮತಿ ಸಿಗುವುದು ಅನುಮಾನವಾಗಿದ್ದು, ಆರ್‌ಸಿಬಿ ತನ್ನ ತವರು ನೆಲವನ್ನೇ ಕರ್ನಾಟಕದಿಂದ ಹೊರಗೆ ಸ್ಥಳಾಂತರಿಸುವ ಅನಿವಾರ್ಯತೆಗೆ ಸಿಲುಕಿದೆ.

ಚಿನ್ನಸ್ವಾಮಿಗೆ ಬಿದ್ದ ಬೀಗ, ಕಾರಣವೇನು?: ಈ ವರ್ಷ ಜೂನ್‌ನಲ್ಲಿ ನಡೆದ ಆರ್‌ಸಿಬಿ ವಿಜಯೋತ್ಸವದ ಮೆರವಣಿಗೆಯ ವೇಳೆ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತದಲ್ಲಿ 11ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡು, ನೂರಾರು ಜನ ಗಾಯಗೊಂಡಿದ್ದರು.

ಈ ಘಟನೆಯ ನಂತರ, ಕ್ರೀಡಾಂಗಣವನ್ನು ಯಾವುದೇ ಬೃಹತ್ ಸಾರ್ವಜನಿಕ ಕಾರ್ಯಕ್ರಮಕ್ಕೆ ಬಳಸುವುದು “ಅಸುರಕ್ಷಿತ” ಎಂದು ಪರಿಗಣಿಸಲಾಗಿದೆ. ಇದರ ಮೊದಲ ಪರಿಣಾಮವಾಗಿ, ಇಲ್ಲಿ ನಡೆಯಬೇಕಿದ್ದ ಮಹತ್ವದ ಮಹಿಳಾ ವಿಶ್ವಕಪ್ ಪಂದ್ಯಗಳನ್ನು ಈಗಾಗಲೇ ನವಿ ಮುಂಬೈಗೆ ಸ್ಥಳಾಂತರಿಸಲಾಗಿದೆ.

ಬಿಸಿಸಿಐನಿಂದ ಇನ್ನೂ ಸುರಕ್ಷತಾ ಕ್ಲೀನ್ ಚಿಟ್ ಸಿಗದ ಕಾರಣ, ಐಪಿಎಲ್‌ನಂತಹ ಹೈ-ವೋಲ್ಟೇಜ್ ಪಂದ್ಯಗಳನ್ನು ಇಲ್ಲಿ ಆಯೋಜಿಸುವುದು ಬಹುತೇಕ ಅಸಾಧ್ಯವಾಗಿದೆ. ಚಿನ್ನಸ್ವಾಮಿಯನ್ನು ಹೊರತುಪಡಿಸಿದರೆ, ಐಪಿಎಲ್‌ನಂತಹ ಬೃಹತ್ ಟೂರ್ನಿಯನ್ನು ಆಯೋಜಿಸಲು ಬೇಕಾದ ಸೌಲಭ್ಯಗಳು ಮತ್ತು ಪ್ರೇಕ್ಷಕರ ಸಾಮರ್ಥ್ಯವಿರುವ ಬೇರೆ ಕ್ರೀಡಾಂಗಣ ರಾಜ್ಯದಲ್ಲಿಲ್ಲದಿರುವುದು ಆರ್‌ಸಿಬಿಗೆ ದೊಡ್ಡ ತಲೆನೋವಾಗಿದೆ.

ಪುಣೆ ಜೊತೆ ಮಾತುಕತೆ, ಹೊಸ ತವರು ನೆಲ ಫಿಕ್ಸ್?: ಈ ಅನಿವಾರ್ಯತೆಯಿಂದಾಗಿ ಆರ್‌ಸಿಬಿ ಮ್ಯಾನೇಜ್‌ಮೆಂಟ್ ಇದೀಗ ಹೊಸ ತವರು ನೆಲಕ್ಕಾಗಿ ಹುಡುಕಾಟ ನಡೆಸುತ್ತಿದ್ದು, ಮಹಾರಾಷ್ಟ್ರದ ಪುಣೆ ನಗರವು ಮುಂಚೂಣಿಯಲ್ಲಿದೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಆರ್‌ಸಿಬಿ ತನ್ನ ಎಲ್ಲಾ ‘ಹೋಮ್’ ಪಂದ್ಯಗಳನ್ನು ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ (MCA) ಕ್ರೀಡಾಂಗಣದಲ್ಲಿ ಆಡುವ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆಗಳು ನಡೆದಿವೆ.

ಈ ಬಗ್ಗೆ ಮಾತನಾಡಿರುವ ಎಂಸಿಎ ಕಾರ್ಯದರ್ಶಿ ಕಮಲೇಶ್ ಪೈ, “ಬೆಂಗಳೂರಿನ ದುರಂತದ ಕಾರಣ, ಅವರು ಪಂದ್ಯಗಳನ್ನು ಆಯೋಜಿಸಲು ಪರ್ಯಾಯ ಸ್ಥಳವನ್ನು ಹುಡುಕುತ್ತಿದ್ದಾರೆ. ನಮ್ಮ ಕ್ರೀಡಾಂಗಣವನ್ನು ಒದಗಿಸಲು ನಾವು ಮುಂದೆ ಬಂದಿದ್ದೇವೆ. ಚರ್ಚೆಗಳು ನಡೆಯುತ್ತಿವೆ, ಆದರೆ ಇನ್ನೂ ಅಂತಿಮವಾಗಿಲ್ಲ,” ಎಂದು ಖಚಿತಪಡಿಸಿದ್ದಾರೆ.

ಐಪಿಎಲ್ ಇತಿಹಾಸದಲ್ಲಿ ಒಂದು ತಂಡ ತನ್ನ ತವರು ನೆಲವನ್ನು ಬದಲಾಯಿಸುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಬೇರೆ ಬೇರೆ ಕಾರಣಗಳಿಗಾಗಿ ತಾತ್ಕಾಲಿಕವಾಗಿ ತಮ್ಮ ಹೋಮ್ ಗ್ರೌಂಡ್ ಬದಲಿಸಿದ್ದವು.

ಇದೀಗ ಆರ್‌ಸಿಬಿ ಕೂಡ ಅದೇ ಹಾದಿ ಹಿಡಿಯುವ ಸಾಧ್ಯತೆ ದಟ್ಟವಾಗಿದೆ. ಇದರ ಜೊತೆಗೆ, 2026ರ ಐಪಿಎಲ್‌ಗೂ ಮುನ್ನ ತಂಡಕ್ಕೆ ಹೊಸ ಮಾಲೀಕರು ಬರಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದ್ದು, ಈ ಎಲ್ಲಾ ಬೆಳವಣಿಗೆಗಳು ತಂಡದ ಭವಿಷ್ಯ ಮತ್ತು ಅಭಿಮಾನಿಗಳ ಮೇಲೆ ಯಾವ ಪರಿಣಾಮ ಬೀರಲಿವೆ ಎಂಬುದನ್ನು ಕಾದುನೋಡಬೇಕಿದೆ.

Previous articleRanji Trophy: ಸೋಲಿನ ಸುಳಿಯಿಂದ ಕರ್ನಾಟಕ ಪಾರು: ಮಯಾಂಕ್ ಭರ್ಜರಿ ಶತಕಕ್ಕೆ ಪಂದ್ಯ ಡ್ರಾ!
Next articleಕಾಂಗ್ರೆಸ್ ನಾಯಕರ ಬೇಜವಾಬ್ದಾರಿ ಹೇಳಿಕೆಗಳು ಆತಂಕಕಾರಿ

LEAVE A REPLY

Please enter your comment!
Please enter your name here