ವಿರಾಟ್ ಕೊಹ್ಲಿ: ಇಂದಿಗೆ ಸರಿಯಾಗಿ ಮೂರು ವರ್ಷಗಳ ಹಿಂದೆ, 2022ರ ಅಕ್ಟೋಬರ್ 23 ರಂದು, ಮೆಲ್ಬೋರ್ನ್ ಕ್ರಿಕೆಟ್ ಮೈದಾನ (MCG) ಒಂದು ಐತಿಹಾಸಿಕ ಮತ್ತು ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಸುಮಾರು 90,ಸಾವಿರಕ್ಕೂ ಅಧಿಕ ಪ್ರೇಕ್ಷಕರು ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ, ಟಿ20 ವಿಶ್ವಕಪ್‌ನ ರೋಚಕ ಪಂದ್ಯದಲ್ಲಿ, ಬದ್ಧವೈರಿ ಪಾಕಿಸ್ತಾನದ ವಿರುದ್ಧ ಭಾರತ ಸೋಲಿನ ದವಡೆಯಲ್ಲಿದ್ದಾಗ, ‘ಕಿಂಗ್’ ವಿರಾಟ್ ಕೊಹ್ಲಿ ಆಡಿದ ಒಂದು ಸ್ಮರಣೀಯ ಇನ್ನಿಂಗ್ಸ್ ಕ್ರಿಕೆಟ್ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿದೆ.
ಆ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ, ಭಾರತಕ್ಕೆ 160 ರನ್‌ಗಳ ಸವಾಲಿನ ಗುರಿ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತದ ಆರಂಭ ಅತ್ಯಂತ ಹೀನಾಯವಾಗಿತ್ತು. ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್. ರಾಹುಲ್, ಸೂರ್ಯಕುಮಾರ್ ಯಾದವ್ ಮತ್ತು ಅಕ್ಷರ್ ಪಟೇಲ್ ಬೇಗನೆ ಪೆವಿಲಿಯನ್‌ಗೆ ಮರಳಿದರು. ಕೇವಲ 31 ರನ್‌ಗಳಿಗೆ 4 ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡಾಗ, ಇಡೀ ಕ್ರೀಡಾಂಗಣ ಮೌನಕ್ಕೆ ಶರಣಾಗಿತ್ತು ಮತ್ತು ಭಾರತದ ಗೆಲುವಿನ ಆಸೆ ಬಹುತೇಕ ಕಮರಿ ಹೋಗಿತ್ತು.
‘ಕಿಂಗ್ ಕೊಹ್ಲಿ’ಯ ಅಸಲಿ ಆಟ: ಕ್ರೀಸ್‌ನಲ್ಲಿದ್ದ ವಿರಾಟ್ ಕೊಹ್ಲಿ ಬೇರೆಯದ್ದೇ ಸಂಕಲ್ಪ ಮಾಡಿದ್ದರು. ಹಾರ್ದಿಕ್ ಪಾಂಡ್ಯ ಜೊತೆಗೂಡಿ ಭಾರತದ ಕುಸಿದ ಇನ್ನಿಂಗ್ಸ್‌ಗೆ ಆಸರೆಯಾದರು. ಇವರಿಬ್ಬರ ಅಮೂಲ್ಯ ಶತಕದ ಜೊತೆಯಾಟವು ತಂಡವನ್ನು ಮತ್ತೆ ಸ್ಪರ್ಧೆಗೆ ತಂದಿತ್ತಾದರೂ, ಕೊನೆಯ ಮೂರು ಓವರ್‌ಗಳಲ್ಲಿ ಗೆಲುವಿಗೆ 48 ರನ್‌ಗಳ ಕಠಿಣ ಸವಾಲು ಎದುರಾಗಿತ್ತು.
ಆಗ ಶುರುವಾಗಿದ್ದೇ ‘ಕಿಂಗ್ ಕೊಹ್ಲಿ’ಯ ಅಸಲಿ ಆಟ. ಶಾಹೀನ್ ಅಫ್ರಿದಿ ಓವರ್‌ನಲ್ಲಿ 17 ರನ್ ಬಂದರೂ, 19ನೇ ಓವರ್ ಎಸೆಯಲು ಬಂದ ವೇಗಿ ಹ್ಯಾರಿಸ್ ರೌಫ್ ಐದನೇ ಎಸೆತದಲ್ಲಿ, ಕೊಹ್ಲಿ ಹೊಡೆದ ನೇರ ಸಿಕ್ಸರ್ ಅನ್ನು ಕ್ರಿಕೆಟ್ ಇತಿಹಾಸದ ಶ್ರೇಷ್ಠ ಹೊಡೆತಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಅದು ಕೇವಲ ಒಂದು ಸಿಕ್ಸರ್ ಆಗಿರಲಿಲ್ಲ; ಅದು ಪಾಕಿಸ್ತಾನದ ಕೈಯಿಂದ ಪಂದ್ಯವನ್ನು ಕಸಿದುಕೊಂಡ ಹೊಡೆತವಾಗಿತ್ತು. ಮರು ಎಸೆತದಲ್ಲೇ ಮತ್ತೊಂದು ಸಿಕ್ಸರ್ ಬಾರಿಸುವ ಮೂಲಕ, ಅಸಾಧ್ಯವೆನಿಸಿದ್ದ ಸಮೀಕರಣವನ್ನು ಕೊಹ್ಲಿ ಸುಲಭವಾಗಿಸಿದರು.
ಕೊನೆಯ ಓವರ್‌ನ ನಾಟಕೀಯ ಕ್ಷಣಗಳನ್ನು ಮೆಟ್ಟಿನಿಂತ ಭಾರತ, 4 ವಿಕೆಟ್‌ಗಳ ರೋಚಕ ಜಯ ಸಾಧಿಸಿತು. ಅಂದು, 53 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳೊಂದಿಗೆ ಅಜೇಯ 82 ರನ್ ಗಳಿಸಿದ ಕೊಹ್ಲಿಯ ಆಟವನ್ನು ಇಂದಿಗೂ ಟಿ20 ಕ್ರಿಕೆಟ್‌ನ ಸಾರ್ವಕಾಲಿಕ ಶ್ರೇಷ್ಠ ಇನ್ನಿಂಗ್ಸ್ ಎಂದು ಕರೆಯಲಾಗುತ್ತದೆ. ಸೋಲುವ ಪಂದ್ಯವನ್ನು ಒಬ್ಬನೇ ಹೋರಾಡಿ ಗೆಲ್ಲಿಸಿಕೊಟ್ಟ ಆ ಐತಿಹಾಸಿಕ ದಿನ, ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಿಕ್ಕ ದೀಪಾವಳಿಯ ಗಿಪ್ಟ್ ಆಗಿತ್ತು.