ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣದಿಂದ ಸಂಕಟ ಅನುಭವಿಸಿದ್ದ ಆರ್‌ಸಿಬಿ ಆಡಳಿತ ಮಂಡಳಿ ಈಗ ಅಭಿಮಾನಿಗಳಿಗೆ ಭಾವನಾತ್ಮಕ ಪತ್ರ ಬರೆದಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್, ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ ಆರ್‌ಸಿಬಿ, ಅಭಿಮಾನಿಗಳಿಗಾಗಿ ಕೇರ್ ಸೆಂಟರ್ ತೆರೆಯಲು ಮುಂದಾಗಿರುವುದಾಗಿ ಮಾಹಿತಿಯನ್ನು ಹಂಚಿಕೊಂಡಿದೆ.
ಪತ್ರದಲ್ಲಿ ಏನಿದೆ?
ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳ ಕಾಲ ಕಳೆದಿದೆ.
ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ.
ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು. ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು.
ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ.
ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು.
ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು.
ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ.
ಇಂದು ನಾವು ಮರಳಿದ್ದೇವೆ;
ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.
ಆರ್‌ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ.
ಹೆಚ್ಚಿನ ಮಾಹಿತಿ… ಶೀಘ್ರದಲ್ಲೇ… ಎಂದು Royal Challengers Bengaluru ತನ್ನ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.