ಆರ್‌ಸಿಬಿ ತಂಡ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದೆ. ಆದರೆ 2025ರ ಐಪಿಎಲ್ ಪಂದ್ಯಾವಳಿ ಬಳಿಕ ವಿಜಯೋತ್ಸವ ಆಚರಣೆ ಮಾಡುವಾಗ ಬೆಂಗಳೂರು ನಗರದಲ್ಲಿ ಕಾಲ್ತುಳಿತ ಸಂಭವಿಸಿತ್ತು.
ಈ ದುರಂತದಲ್ಲಿ 11 ಜನರು ಮೃತಪಟ್ಟಿದ್ದರು. ಈ ದುರಂತದ 84 ದಿನಗಳ ನಂತರ ಸಾಮಾಜಿಕ ಮಾಧ್ಯಮದಲ್ಲಿ ಆರ್‌ಸಿಬಿ ಪೋಸ್ಟ್ ಒಂದನ್ನು ಹಾಕಿದೆ. ಅಭಿಮಾನಿಗಳ ಕಲ್ಯಾಣಕ್ಕಾಗಿ ಆರ್‌ಸಿಬಿ ಕೇರ್ಸ್ ಅನ್ನು ಪ್ರಾರಂಭಿಸುತ್ತಿದೆ ಎಂದು ಹೇಳಿದೆ.
ಪೋಸ್ಟ್‌ನ ವಿವರಗಳು: ಆರ್‌ಸಿಬಿ ಕೇರ್ಸ್ ಅಧಿಕೃತ ಪ್ರಕಟಣೆ. ಜೂನ್ 4, 2025 ಈ ದಿನ ನಮ್ಮ ಹೃದಯದಲ್ಲಿ ಶಾಶ್ವತವಾಗಿ ಉಳಿಯಲಿದೆ.
ನಾವು ಕಳೆದುಕೊಂಡಿದ್ದು 11 ಅಭಿಮಾನಿಗಳನ್ನಷ್ಟೇ ಅಲ್ಲ…ಅವರು ನಮ್ಮ ಕುಟುಂಬದ ಸದಸ್ಯರಾಗಿದ್ದರು, ನಮ್ಮ ಹೃದಯದ ಭಾಗವಾಗಿದ್ದರು. ಅವರ ಉತ್ಸಾಹವೇ ನಮ್ಮ ಊರು, ಸಮುದಾಯ ಮತ್ತು ತಂಡಕ್ಕೆ ಜೀವ ತುಂಬುವ ಬೆಳಕಾಗಿತ್ತು. ನಮ್ಮ ನೆನಪುಗಳಲ್ಲಿ ಅವರು ಸದಾ ಜೀವಂತವಾಗಿರುತ್ತಾರೆ.
ಅವರ ಜಾಗವನ್ನು ಯಾವ ಸಹಾಯವೂ ತುಂಬಲಾರದು. ಆದರೆ ಮೊದಲನೇ ಮತ್ತು ಗೌರವದ ಸಂಕೇತವಾಗಿ, ಆರ್‌ಸಿಬಿ ಪ್ರತಿ ಕುಟುಂಬಕ್ಕೆ ತಲಾ 25 ಲಕ್ಷ ನೆರವನ್ನು ನೀಡಿದೆ. ಇದು ಕೇವಲ ಆರ್ಥಿಕ ಸಹಾಯವಲ್ಲ. ಕರುಣೆ, ಒಗ್ಗಟ್ಟು ಮತ್ತು ನಿರಂತರ ಕಾಳಜಿಯ ಭರವಸೆ.
ಇದು ಆರ್‌ಸಿಬಿ ಕೇರ್ಸ್‌ನ ಆರಂಭವೂ ಹೌದು. ಅವರ ನೆನಪನ್ನು ಗೌರವಿಸುವ ಮೂಲಕ ಶುರುವಾದ ಈ ಪ್ರಯತ್ನ, ಅಭಿಮಾನಿಗಳ ಭಾವನೆ, ನಂಬಿಕೆ ಮತ್ತು ಸುರಕ್ಷತೆ ಪ್ರತಿಬಿಂಬಿಸುವ ದೀರ್ಘಕಾಲದ ಬದ್ಧತೆ. ಆರ್‌ಸಿಬಿ ಕೇರ್ಸ್ ಕುರಿತು ಇನ್ನಷ್ಟು ವಿವರಗಳು ಶೀಘ್ರದಲ್ಲೇ ಎಂದು ಹೇಳಿದೆ.
ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ರೂ. 25 ಲಕ್ಷ ಪರಿಹಾರವನ್ನು ಕರ್ನಾಟಕ ಸರ್ಕಾರ ನೀಡಿದೆ.
ಕಾಲ್ತುಳಿತ ದುರಂತದ ಕುರಿತು ಸದನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರವನ್ನು ನೀಡಿದ್ದರು. ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸದಸ್ಯರಾದ ಸುರೇಶ್ ಕುಮಾರ್, ಜೆಡಿಎಸ್‌ನ ಎಂ.ಟಿ ಕೃಷ್ಣಪ್ಪ ಅವರು ನಿಲುವಳಿ ಸೂಚನೆಯ ಮೇಲೆ ಮಾತನಾಡಿದ್ದಾರೆ. ಸುರೇಶ್ ಕುಮಾರ್ ಅವರು ಕಡಿಮೆ ಮಾತನಾಡಿದರೂ ಶೇಕ್ಸಿಯರ್‌ನ ಜೂಲಿಯಸ್ ಸೀಸರ್ ನಾಟಕದಲ್ಲಿ ಮಾರ್ಕ್ ಆಂಟನಿಯ ಭಾಷಣದಂತೆ ಮಾತನಾಡಲು ಪ್ರಯತ್ನಿಸಿದ್ದಾರೆ. ಆಂಟನಿ, ಮಾತುಗಳ ಮೂಲಕವೇ ದಂಗೆ ಎಬ್ಬಿಸಲು ಪ್ರಯತ್ನಿಸಿದ ಮಾತುಗಾರ.
ಆರ್.ಅಶೋಕ ಅವರು ಬಹುಶಃ ಜೂನ್ 4ರಿಂದಲೇ ಹೇಗೆ ಮಾತನಾಡಬೇಕೆಂದು ತಯಾರಿ ಮಾಡಿಕೊಂಡ ಹಾಗೆ ಕಾಣುತ್ತದೆ. ಒಬ್ಬ ರಾಜಕಾರಣಿ ಹೇಗೆ ಮಾತನಾಡಬೇಕೊ ಹಾಗೆ ಮಾತನಾಡಿದ್ದಾರೆ. ತನ್ನ ವಾದ ಸರಣಿಗೆ ಪೂರಕವಾದ ವಿಚಾರಗಳನ್ನು ಪ್ರಸ್ತಾಪಿಸಿದರು. ಅಡ್ಡವಾಗುವ ಅನೇಕ ವಿಚಾರಗಳನ್ನು ಕೈ ಬಿಟ್ಟರು. ಪೊಲೀಸರು, ಆರ್‌ಸಿಬಿ ಮತ್ತು ಕೆಎಸ್‌ಸಿಎಗಳನ್ನು ಕ್ರಿಟಿಸೈಜ್ ಮಾಡಿದಂತೆ ಕಂಡರೂ ಅವರ ಪರವಾಗಿ ವಾದ ಮಾಡುವ ವಕೀಲರಂತೆಯೂ ಮಾತನಾಡಿದರು. ಅಶೋಕ್ ವೈರ್‌ಲೆಸ್ ಮಸೇಜ್ ಅಂತ ಏನು ಹೇಳಿದರೂ ಅದರ ಬಹುಪಾಲು ಅಂಶಗಳನ್ನು ಜಸ್ಟೀಸ್ ಮೈಖೇಲ್ ಕುನ್ಹಾ ವರದಿಯಲ್ಲಿ ನಮೂದು ಮಾಡಿರುವ ಕ್ರೋನಾಲಜಿಯನ್ನು ಆಧರಿಸಿಯೇ ಮಾತನಾಡಿದ್ದಾರೆ.
ನಾನು ಘಟನೆ ನಡೆದ ದಿನವೇ ತೀವ್ರ ವಿಷಾದ ವ್ಯಕ್ತಪಡಿಸಿದ್ದೇನೆ. ನಾನು ಮುಖ್ಯಮಂತ್ರಿಯಾಗುವ ಮೊದಲು ಮನುಷ್ಯ. ಮಕ್ಕಳನ್ನು ಕಳೆದುಕೊಂಡ ದುಃಖದ ಭಾರ ಏನು ಎಂಬ ಅರಿವು ನನಗಿದೆ. ನಾನು ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ನಡೆದ ಈ ಘಟನೆ ನನ್ನನ್ನು ತೀವ್ರವಾಗಿ ಡಿಸ್ಟರ್ಬ್ ಮಾಡಿದೆ. ಮುಖ್ಯಮಂತ್ರಿಯಾಗದೇ ಇದ್ದಿದ್ದರೂ ಸಹ ಮನುಷ್ಯನಾದ ಕಾರಣಕ್ಕೆ ನನ್ನನ್ನು ದುಃಖಿತನನ್ನಾಗಿ ಮಾಡುತ್ತಿತ್ತು ಎಂಬುದನ್ನು ಅಂತಃಕರಣ ಪೂರ್ವಕವಾಗಿ ತಿಳಿಸಬಯಸುತ್ತೇನೆ. ವ್ಯವಸ್ಥೆಯಲ್ಲಿನ ಲೋಪಗಳಿಂದ ವಿನಾಕಾರಣ ದುರಂತಕ್ಕೀಡಾದ ಮಕ್ಕಳಾಗಲಿ, ಕುಟುಂಬಗಳ ಸದಸ್ಯರಾಗಲಿ ಬದುಕಿರುವವನ್ನು ಶಾಶ್ವತ ದುಃಖದಲ್ಲಿ ಮುಳುಗಿಸುತ್ತವೆ. ಮಕ್ಕಳು ಬದುಕಿದ್ದರೆ ಯಾರ್ಯಾರು ಯಾವ ಯಾವ ಸಾಧನೆ ಮಾಡುತ್ತಿದ್ದರೋ ಯಾರಿಗೆ ಗೊತ್ತು? ಎಂದು ಹೇಳಿದ್ದರು.