ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದಾರೆ. ತಂಡ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಶನಿವಾರ ಪೋಸ್ಟ್ ಹಾಕಿದೆ.
2026ರ ಐಪಿಎಲ್ ಪಂದ್ಯಾವಳಿಗಳ ಆರಂಭಕ್ಕೂ ಮುನ್ನ ಈ ಬೆಳವಣಿಗೆ ನಡೆದಿದೆ. ರಾಹುಲ್ ದ್ರಾವಿಡ್ ರಾಜೀನಾಮೆ ನೀಡಿದ್ದಾರೆ ಎಂದು ರಾಜಸ್ಥಾನ್ ರಾಯಲ್ಸ್ ತಂಡ ಖಚಿತಪಡಿಸಿದೆ. 2025ರ ಐಪಿಎಲ್ ಪಂದ್ಯಾವಳಿಗೂ ಮೊದಲು ಎರಡು ವರ್ಷದ ಒಪ್ಪಂದದ ಆಧಾರದ ಮೇಲೆ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಗೆ ನೇಮಕವಾಗಿದ್ದರು.
ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡದ ಜೊತೆ ಪುರಾತನ ನಂಟು ಹೊಂದಿದ್ದಾರೆ. ಅವರು 2011 ಮತ್ತು 2015ರ ನಡುವೆ ಆಟಗಾರ ಮತ್ತು ಕೋಚ್ ಆಗಿ ತಂಡದ ಆಧಾರ ಸ್ತಂಭವಾಗಿದ್ದರು. ಟೀಮ್ ಇಂಡಿಯಾ 2025ರಲ್ಲಿ ಭಾರತ ತಂಡ ಟಿ-20 ವಿಶ್ವಕಪ್ ಗೆದ್ದ ಬಳಿಕ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿಕೊಂಡಿದ್ದರು. ಆದರೆ ಐಪಿಎಲ್‌ನಲ್ಲಿ ತಂಡ ನಿರೀಕ್ಷಿತ ಫಲಿತಾಂಶ ನೀಡಿರಲಿಲ್ಲ.
14 ಪಂದ್ಯಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಕೇವಲ 4 ಪಂದ್ಯಗಳಲ್ಲಿ ಮಾತ್ರ ಜಯಗಳಿಸಿತ್ತು. 2024ರ ಸೆಪ್ಟೆಂಬರ್ 6ರಂದು ಎರಡು ವರ್ಷದ ಒಪ್ಪಂದದ ಮೇಲೆ ನೇಮಗೊಂಡಿದ್ದ ರಾಹುಲ್ ದ್ರಾವಿಡ್ ಮುಖ್ಯ ಕೋಚ್ ಹುದ್ದೆಯಲ್ಲಿ ಮುಂದುವರೆಯಲು ನಿರಾಕರಿಸಿದ್ದಾರೆ ಎಂದು ತಂಡ ಪೋಸ್ಟ್‌ನಲ್ಲಿ ಹೇಳಿದೆ.
ಪತ್ರಿಕಾ ಪ್ರಕಟಣೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 2026ರ ಐಪಿಎಲ್ ಪಂದ್ಯಾವಳಿಗೂ ಮೊದಲು ರಾಹುಲ್ ದ್ರಾವಿಡ್ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಲಿದ್ದಾರೆ. ಧೀರ್ಘಕಾಲ ರಾಹುಲ್ ತಂಡದ ಭಾಗವಾಗಿದ್ದಾರೆ. ಅವರ ನಾಯಕತ್ವ ಅನೇಕ ಆಟಗಾರರಿಗೆ ಸ್ಪೂರ್ತಿದಾಯಕವಾಗಿದೆ. ಅವರು ಫ್ರಾಂಚೈಸಿ ಮೇಲೆ ಅಳಿಸಲಾಗದ ಗುರುತು ಮೂಡಿಸಿದ್ದಾರೆ ಎಂದು ಹೇಳಿದೆ.