ಟೊಕಿಯೋ: ನಿರೀಕ್ಷೆಗಳ ಭಾರ ಹೊತ್ತಿರುವ ಭಾರತದ ಒಲಿಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಸೆ. 13ರಿಂದ ಆರಂಭವಾಗಲಿರುವ ವಿಶ್ವಚಾಂಪಿಯನ್‌ಶಿಪ್‌ನಲ್ಲಿ ಪದಕ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.
2023ರಲ್ಲಿ ಬುದಾಪೆಸ್ಟ್‌ನಲ್ಲಿ ನಡೆದಿದ್ದ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾ 88.17 ಮೀ. ದೂರ ಎಸೆದು ಚಿನ್ನ ಗೆದ್ದಿದ್ದರು. ಪಾಕಿಸ್ತಾನದ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಂ (87.82 ಮೀ.) ದೂರ ಎಸೆದು ಎರಡನೇ ಸ್ಥಾನ ಪಡೆದಿದ್ದರು. ಜೆಕ್ ರಿಪಬ್ಲಿಕ್‌ನ ಜಾಕೂಬ್ (86.67 ಮೀ.) ದೂರ ಎಸೆದು ಮೂರನೇ ಸ್ಥಾನ ಪಡೆದಿದ್ದರು.
ಸೆ. 18ರಂದು ನಡೆಯುವ ಫೈನಲ್‌ನಲ್ಲಿ ವಿಜೇತ ನೀರಜ್ ಚೋಪ್ರಾ ಚಿನ್ನ ಗೆದ್ದರೆ ಸತತ ಎರಡು ಆವೃತ್ತಿಗಳಲ್ಲಿ ಪದಕ ಗೆದ್ದ ಮೂರನೇ ಅಥ್ಲೀಟ್ ಎಂಬ ದಾಖಲೆಯನ್ನು ಬರೆಯಲಿದ್ದಾರೆ.
ಜೆಕ್‌ನ ಜಾವೆಲಿನ್ ಪಟು ಜಾನ್ ಜೆಲೆಜ್ನಿ (1993 ಮತ್ತು 1995)ರಲ್ಲಿ ಈ ಚಿನ್ನ ಗೆದ್ದಿದ್ದರು. ಇದೀಗ ಅವರು ನೀರಜ್ ಚೋಪ್ರಾಗೆ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಚಾಂಪಿಯನ್‌ಶಿಪ್‌ನಲ್ಲಿ ನೀರಜ್ ಚೋಪ್ರಾಗೆ ಚಿನ್ನದ ಪದಕ ಉಳಿಸಿಕೊಳ್ಳುವುದು ಅಷ್ಟು ಸುಲಭವಿಲ್ಲ.
ಪಾಕಿಸ್ತಾನ ನದೀಮ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಭಾರತದ ಜಾವೆಲಿನ್ ಪಟುವಿಗೆ ಕಠಿಣ ಸ್ಪರ್ಧೆ ನೀಡಲಿದ್ದಾರೆ. ನೀರಜ್ ಚೋಪ್ರಾ 19 ಅಥ್ಲೀಟ್‌ಗಳ ತಂಡವನ್ನು ಮುನ್ನಡೆಸುತ್ತಿದ್ದು ಪದಕ ಗೆಲ್ಲುವ ಭಾರತದ ಏಕೈಕ ಸ್ಪರ್ಧಿಯಾಗಿದ್ದಾರೆ.
ಎರಡು ಬಾರಿ ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ 2021ರಲ್ಲಿ ಇದೇ ಟೋಕಿಯಾದ ಬ್ಲಾಕ್‌ಬಸ್ಟರ್ ಮೈದಾನದಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ಇತಿಹಾಸ ನಿರ್ಮಿಸಿದ್ದರು.
ಇದೀಗ ಇದೇ ಮೈದಾನದಲ್ಲಿ ಮತ್ತೆ ಇತಿಹಾಸ ನಿರ್ಮಿಸುತ್ತಾರಾ ಎನ್ನುವ ಕುತೂಹಲವಿದೆ. ಹಾಲಿ ಚಾಂಪಿಯನ್ ಆಗಿರುವುದರಿಂದ ನೀರಜ್ ಚೋಪ್ರಾ ವೈಲ್ ಕಾರ್ಡ್ ಪಡೆದು ಕ್ರೀಡಾಕೂಟ ಪ್ರವೇಶಿಸಿದ್ದಾರೆ.