ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಪ್ರಮುಖ ಕಾರ್ಯಕ್ರಮಗಳು – ಸಂಚಾರ ನಿರ್ಬಂಧ ಘೋಷಣೆ
ನವದೆಹಲಿ: ಅರ್ಜೆಂಟೀನಾದ ವಿಶ್ವಪ್ರಸಿದ್ಧ ಫುಟ್ಬಾಲ್ ಆಟಗಾರ ಹಾಗೂ ಸರ್ವಕಾಲಿಕ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾದ ಲಿಯೋನೆಲ್ ಮೆಸ್ಸಿ ತಮ್ಮ ಬಹು ನಿರೀಕ್ಷಿತ GOAT ಇಂಡಿಯಾ ಟೂರ್ ನಾಲ್ಕನೇ ಹಾಗೂ ಕೊನೆಯ ಚರಣದ ಅಂಗವಾಗಿ ಇಂದು (ಸೋಮವಾರ) ದೆಹಲಿಗೆ ಆಗಮಿಸಲಿದ್ದಾರೆ. ಸುಮಾರು 14 ವರ್ಷಗಳ ನಂತರ ಮೆಸ್ಸಿ ಭಾರತಕ್ಕೆ ಭೇಟಿ ನೀಡುತ್ತಿರುವುದು ಫುಟ್ಬಾಲ್ ಅಭಿಮಾನಿಗಳಲ್ಲಿ ಭಾರೀ ಉತ್ಸಾಹಕ್ಕೆ ಕಾರಣವಾಗಿದೆ.
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಮಧ್ಯಾಹ್ನ 1 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪ್ರಮುಖ ಕಾರ್ಯಕ್ರಮಗಳು ನಡೆಯಲಿದ್ದು, ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದೆ. ಈ ಕಾರ್ಯಕ್ರಮದ ಅಂಗವಾಗಿ, ಮೂರು ಯುವ ಟ್ರೋಫಿಗಳನ್ನು ಗೆದ್ದ ಮಿನರ್ವಾ ಅಕಾಡೆಮಿಯ ತಂಡಗಳನ್ನು ಲಿಯೋನೆಲ್ ಮೆಸ್ಸಿ ಸನ್ಮಾನಿಸಲಿದ್ದಾರೆ. ಭಾರತೀಯ ಫುಟ್ಬಾಲ್‌ನ ಭವಿಷ್ಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಈ ಗೌರವ ಕಾರ್ಯಕ್ರಮ ಆಯೋಜಿಸಲಾಗಿದೆ.
ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್: ಬೆಂಗಳೂರಿನಲ್ಲಿ ಪಂದ್ಯ ಖಚಿತ
ಸೆಲೆಬ್ರಿಟಿ ಫುಟ್ಬಾಲ್ ಪಂದ್ಯ: ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸೆಲೆಬ್ರಿಟಿ ಫುಟ್ಬಾಲ್ ಪಂದ್ಯ ಕೂಡ ನಡೆಯಲಿದೆ. ಪೂರ್ಣ ಪ್ರಮಾಣದ ಅಂತರರಾಷ್ಟ್ರೀಯ ಪಂದ್ಯ ನಡೆಯದಿದ್ದರೂ, ಪ್ರದರ್ಶನ ಪಂದ್ಯ ಮತ್ತು ಅಭಿಮಾನಿಗಳ ಸಂಭ್ರಮ ಕಾರ್ಯಕ್ರಮಗಳು ಫುಟ್ಬಾಲ್ ಪ್ರೇಮಿಗಳಿಗೆ ಮರೆಯಲಾಗದ ಕ್ಷಣಗಳನ್ನು ನೀಡಲಿವೆ.
ಸಂಚಾರ ನಿರ್ಬಂಧ – ದೆಹಲಿ ಟ್ರಾಫಿಕ್ ಪೊಲೀಸರ ಸಲಹೆ: GOAT ಇಂಡಿಯಾ ಟೂರ್ – ದೆಹಲಿ ಲೆಗ್ ಹಿನ್ನೆಲೆಯಲ್ಲಿ ದೆಹಲಿ ಸಂಚಾರ ಪೊಲೀಸರು ಸಂಚಾರ ಸಲಹೆಗಳನ್ನು ಹೊರಡಿಸಿದ್ದಾರೆ. ಭಾರೀ ಪ್ರೇಕ್ಷಕರ ದಟ್ಟಣೆ ಮತ್ತು ಭದ್ರತಾ ವ್ಯವಸ್ಥೆಗಳ ಹಿನ್ನೆಲೆಯಲ್ಲಿ ಕ್ರೀಡಾಂಗಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚಾರ ನಿಧಾನಗತಿಯಲ್ಲಿ ಸಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಲಹೆಯ ಪ್ರಕಾರ, ಬಹದ್ದೂರ್‌ಶಾ ಜಾಫರ್ ಮಾರ್ಗ ಮತ್ತು ಜವಾಹರಲಾಲ್ ನೆಹರು (ಜೆಎಲ್‌ಎನ್) ಮಾರ್ಗಗಳಲ್ಲಿ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಗುತ್ತದೆ ಅಥವಾ ನಿರ್ಬಂಧಿಸಲಾಗುತ್ತದೆ. ಕಾರ್ಯಕ್ರಮದ ವೇಳೆ ದರಿಯಾಗಂಜ್‌ನಿಂದ ಬಹದ್ದೂರ್‌ಶಾ ಜಾಫರ್ ಮಾರ್ಗದ ಕಡೆಗೆ ಹಾಗೂ ಗುರುನಾನಕ್ ಚೌಕ್‌ನಿಂದ ಅಸಫ್ ಅಲಿ ರಸ್ತೆಯವರೆಗೆ ಭಾರೀ ವಾಹನಗಳಿಗೆ ಪ್ರವೇಶವಿರುವುದಿಲ್ಲ.
ಇದನ್ನೂ ಓದಿ: ಕೆಲ ಕ್ರಿಕೆಟಿಗರ ದುಶ್ಚಟಗಳ ಕುರಿತು ರಿವಾಬಾ ಜಡೇಜಾ ಹೇಳಿಕೆ: ಭಾರೀ ಚರ್ಚೆ, ವಿವಾದ
ಈ ಮಾರ್ಗಗಳನ್ನು ತಪ್ಪಿಸುವಂತೆ ಸೂಚನೆ: ಮಧ್ಯಾಹ್ನ 12 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಪ್ರಯಾಣಿಕರು ಕೆಲವು ಪ್ರಮುಖ ರಸ್ತೆಗಳನ್ನು ತಪ್ಪಿಸುವಂತೆ ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ. ಅವುಗಳಲ್ಲಿ ರಾಜ್‌ಘಾಟ್‌ನಿಂದ ದೆಹಲಿ ಗೇಟ್ – ಕಮಲಾ ಮಾರುಕಟ್ಟೆಯವರೆಗಿನ ಜೆಎಲ್‌ಎನ್ ಮಾರ್ಗ. ತುರ್ಕಮನ್ ಗೇಟ್‌ನಿಂದ ದೆಹಲಿ ಗೇಟ್‌ವರೆಗಿನ ಅಸಫ್ ಅಲಿ ರಸ್ತೆ. ದೆಹಲಿ ಗೇಟ್‌ನಿಂದ ಐಟಿಒವರೆಗಿನ ಬಹದ್ದೂರ್‌ಶಾ ಜಾಫರ್ ಮಾರ್ಗ ಸೇರಿವೆ.
ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು ಹಾಗೂ ದೆಹಲಿ ಸಂಚಾರ ಪೊಲೀಸ್ ಸಾಮಾಜಿಕ ಜಾಲತಾಣ ಮತ್ತು ಅಧಿಕೃತ ಚಾನೆಲ್‌ಗಳ ಮೂಲಕ ನವೀಕೃತ ಮಾಹಿತಿಯನ್ನು ಪಡೆಯಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ಫುಟ್ಬಾಲ್ ಅಭಿಮಾನಿಗಳ ಸಂಭ್ರಮ: ಕೋಲ್ಕತ್ತಾ, ಹೈದರಾಬಾದ್ ಮತ್ತು ಮುಂಬೈ ಬಳಿಕ ದೆಹಲಿಯಲ್ಲಿ ನಡೆಯುವ ಈ ಅಂತಿಮ ಹಂತದ ಕಾರ್ಯಕ್ರಮದೊಂದಿಗೆ GOAT ಇಂಡಿಯಾ ಟೂರ್ 2025 ಮುಕ್ತಾಯಗೊಳ್ಳಲಿದೆ. 2011ರ ಬಳಿಕ ಮತ್ತೆ ಭಾರತಕ್ಕೆ ಬಂದಿರುವ ಮೆಸ್ಸಿಯನ್ನು ನೇರವಾಗಿ ನೋಡುವ ಅವಕಾಶ ಫುಟ್ಬಾಲ್ ಅಭಿಮಾನಿಗಳಿಗೆ ಐತಿಹಾಸಿಕ ಕ್ಷಣವಾಗಲಿದೆ.
ಇದನ್ನೂ ಓದಿ: ಮೆಸ್ಸಿ GOAT ಇಂಡಿಯಾ ಟೂರ್ ಸಂಭ್ರಮದ ನಡುವೆ ಅಭಿಮಾನಿಗಳಿಂದ ಆಕ್ರೋಶ























