ಬೆಂಗಳೂರು: ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ವತಿಯಿಂದ ನೀಡಲಾಗುತ್ತಿರುವ ಕರ್ನಾಟಕ ಒಲಂಪಿಕ್ 2025 ಪ್ರಶಸ್ತಿಗೆ ಭಾಜನರಾದ ಕ್ರೀಡಾ ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ಸಲ್ಲಿಸಿದರು. ಬೆಂಗಳೂರಿನಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹ ಮತ್ತು ಮುಂದಿನ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ವಿವರಿಸಿದರು.
1958ರಲ್ಲಿ ಪ್ರಾರಂಭವಾದ ಕರ್ನಾಟಕ ಒಲಂಪಿಕ್ಸ್ ಸಂಸ್ಥೆ ಕಳೆದ ಹಲವು ದಶಕಗಳಿಂದ ಕ್ರೀಡಾ ಕ್ಷೇತ್ರದ ಉತ್ತೇಜನಕ್ಕೆ ನಿರಂತರವಾಗಿ ಕೊಡುಗೆ ನೀಡುತ್ತಾ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್ ಅವರು ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡ ಬಳಿಕ ಸಂಸ್ಥೆಯು ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಇದನ್ನೂ ಓದಿ: ಇಂದು ರಾಜ್ಯಾದ್ಯಂತ ಪಲ್ಸ್ ಪೋಲಿಯೊ ಅಭಿಯಾನ: 62.40 ಲಕ್ಷ ಮಕ್ಕಳಿಗೆ ಲಸಿಕೆ ಗುರಿ
ತಮ್ಮ ಅವಧಿಯಲ್ಲಿಯೇ ಕರ್ನಾಟಕ ಒಲಂಪಿಕ್ಸ್ ಸಂಸ್ಥೆಗೆ ಸ್ವಂತ ಕಟ್ಟಡದ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿರುವುದನ್ನು ಸ್ಮರಿಸಿದ ಸಿಎಂ, ಇಡೀ ದೇಶದಲ್ಲಿಯೇ ಆಂಧ್ರಪ್ರದೇಶ ಮತ್ತು ಕೇರಳದಂತೆ ಕರ್ನಾಟಕವೂ ಈಗ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಒಲಂಪಿಕ್ಸ್ ಸಂಸ್ಥೆಯನ್ನು ಹೊಂದಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಸಂಸ್ಥೆಯು ಕೇವಲ ಒಂದು ಕ್ರೀಡೆಯಲ್ಲ, ಎಲ್ಲಾ ಕ್ರೀಡೆಗಳಿಗೆ ಸಮಾನವಾಗಿ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಬಹುಮಾನಗಳ ಕುರಿತು ಮಾತನಾಡಿದ ಅವರು, ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಕರ್ನಾಟಕದ ಕ್ರೀಡಾಪಟುಗಳಿಗೆ 6 ಕೋಟಿ ರೂ., ಬೆಳ್ಳಿ ಪದಕಕ್ಕೆ 4 ಕೋಟಿ ರೂ. ಹಾಗೂ ಕಂಚಿನ ಪದಕಕ್ಕೆ 3 ಕೋಟಿ ರೂ. ನಗದು ಬಹುಮಾನವನ್ನು ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು. ಇದು ಕ್ರೀಡಾಪಟುಗಳಲ್ಲಿ ಉತ್ಸಾಹ ತುಂಬುವ ಉದ್ದೇಶದಿಂದ ತೆಗೆದುಕೊಂಡ ಮಹತ್ವದ ನಿರ್ಧಾರವಾಗಿದೆ ಎಂದರು.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಸ್ಟಾರ್ಟ್‌ಅಪ್ ಕ್ರಾಂತಿಯ ಆರಂಭ: ನಿಮ್ಮೂರಲ್ಲೇ ಕನಸು ನನಸಾಗಿಸಿಕೊಳ್ಳಿ
ಕಠಿಣ ಪರಿಶ್ರಮ, ಶಿಸ್ತು ಮತ್ತು ಗುರಿಸಾಧನೆಯ ಛಲವಿದ್ದರೆ ಕರ್ನಾಟಕದ ಕ್ರೀಡಾಪಟುಗಳು ಒಲಂಪಿಕ್ಸ್‌ನಲ್ಲಿ ಪದಕ ಗೆಲ್ಲುವುದು ಅಸಾಧ್ಯವಲ್ಲ. ರಾಜ್ಯದ ಕ್ರೀಡಾಪಟುಗಳು ಭವಿಷ್ಯದಲ್ಲಿ ಒಲಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿ ಅತ್ಯಂತ ಅಗತ್ಯವಾಗಿದ್ದು, ಗುರಿಸಾಧನೆಯೇ ಜೀವನದ ಧ್ಯೇಯವಾಗಬೇಕು ಎಂದು ಯುವಜನತೆಗೆ ಕರೆ ನೀಡಿದರು.
ಕ್ರೀಡಾಪಟುಗಳಿಗೆ ಸರ್ಕಾರಿ ಉದ್ಯೋಗದಲ್ಲಿಯೂ ಮೀಸಲಾತಿ ನೀಡಲಾಗಿದೆ ಎಂದು ಸಿಎಂ ಸ್ಪಷ್ಟಪಡಿಸಿದರು. ಪೊಲೀಸ್ ಮತ್ತು ಅರಣ್ಯ ಇಲಾಖೆಯಲ್ಲಿ ಶೇ. 3ರಷ್ಟು ಹಾಗೂ ಇತರೆ ಇಲಾಖೆಯಲ್ಲಿ ಶೇ. 2ರಷ್ಟು ಮೀಸಲಾತಿ ಕ್ರೀಡಾಪಟುಗಳಿಗೆ ಒದಗಿಸಲಾಗುತ್ತದೆ. ಜನವರಿಯಲ್ಲಿ ಕ್ರೀಡಾ ಮೀಸಲಾತಿಯಡಿ ಸರ್ಕಾರಿ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದರು. ಇದರಿಂದ ಹೆಚ್ಚಿನ ಯುವಕರು ಕ್ರೀಡಾ ಕ್ಷೇತ್ರದತ್ತ ಆಕರ್ಷಿತರಾಗಬೇಕು ಎಂದು ಅವರು ಆಶಿಸಿದರು.









