World Cup: ಭಾರತೀಯ ಮಹಿಳಾ ಕ್ರಿಕೆಟ್ನ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನವದು. 52 ವರ್ಷಗಳ ಸುದೀರ್ಘ ಕಾಯುವಿಕೆಗೆ ಅಂತ್ಯ ಹಾಡಿ, ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತೀಯ ಮಹಿಳಾ ತಂಡವು ತನ್ನ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು.
ಈ ಐತಿಹಾಸಿಕ ಕ್ಷಣವನ್ನು ತಮ್ಮ ಬದುಕಿನಲ್ಲಿ ಶಾಶ್ವತವಾಗಿಸಲು, ನಾಯಕಿ ಹರ್ಮನ್ಪ್ರೀತ್ ತಮ್ಮ ತೋಳಿನ ಮೇಲೆ ವಿಶ್ವಕಪ್ ಟ್ರೋಫಿಯ ಟ್ಯಾಟೂವನ್ನು ಹಾಕಿಸಿಕೊಂಡಿದ್ದಾರೆ. ಈ ಟ್ಯಾಟೂ ಕೇವಲ ಚಿತ್ರವಲ್ಲ, ಅದೊಂದು ಭಾವನಾತ್ಮಕ ಪಯಣದ ಪ್ರತೀಕ.
ಚರ್ಮ ಮತ್ತು ಹೃದಯದಲ್ಲಿ ಶಾಶ್ವತ: ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಇತಿಹಾಸ ನಿರ್ಮಿಸಿದ ಮರುದಿನವೇ, ಹರ್ಮನ್ಪ್ರೀತ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಟ್ಯಾಟೂವಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
“ಶಾಶ್ವತವಾಗಿ ನನ್ನ ಚರ್ಮ ಮತ್ತು ಹೃದಯದಲ್ಲಿ ಅಚ್ಚೊತ್ತಿದೆ” ಎಂಬ ಅಡಿಬರಹದೊಂದಿಗೆ ಅವರು ಈ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಐಸಿಸಿ ಟ್ರೋಫಿ ಗೆದ್ದ ಮೊದಲ ಭಾರತೀಯ ಮಹಿಳಾ ನಾಯಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಹರ್ಮನ್ಗೆ ಈ ಗೆಲುವು ಅತ್ಯಂತ ವಿಶೇಷವಾಗಿದೆ.
ಟ್ಯಾಟೂವಿನಲ್ಲಿ ಅಡಗಿದೆ ’52’ರ ರಹಸ್ಯ: ಹರ್ಮನ್ಪ್ರೀತ್ ಹಾಕಿಸಿಕೊಂಡಿರುವ ಟ್ಯಾಟೂವಿನಲ್ಲಿ ಕೇವಲ ವಿಶ್ವಕಪ್ ಟ್ರೋಫಿ ಮತ್ತು ಗೆದ್ದ ವರ್ಷ (2025) ಮಾತ್ರವಿಲ್ಲ. ಅದರ ಜೊತೆಗೆ ’52’ ಎಂಬ ಸಂಖ್ಯೆಯೂ ಇದೆ. ಈ ಸಂಖ್ಯೆಗೆ ಎರಡು ಮಹತ್ವದ ಅರ್ಥಗಳಿವೆ.
ಮೊದಲನೆಯದಾಗಿ, 52 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ಭಾರತ ಈ ವಿಶ್ವಕಪ್ ಗೆದ್ದರೆ, ಎರಡನೆಯದಾಗಿ, ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು ಬರೋಬ್ಬರಿ 52 ರನ್ಗಳಿಂದಲೇ ಮಣಿಸಿದ್ದು! ಈ ಎರಡೂ ಐತಿಹಾಸಿಕ ಘಟನೆಗಳನ್ನು ಈ ಸಂಖ್ಯೆ ಪ್ರತಿನಿಧಿಸುತ್ತದೆ.
6,084 ದಿನಗಳ ತಪಸ್ಸು: ಈ ವಿಶ್ವಕಪ್ ಗೆಲುವು ಹರ್ಮನ್ಪ್ರೀತ್ ಪಾಲಿಗೆ ಒಂದು ದಿನದ ಯಶಸ್ಸಲ್ಲ, ಅದು ಸುಮಾರು 17 ವರ್ಷಗಳ ತಪಸ್ಸಿನ ಫಲ. 2009ರ ಮಾರ್ಚ್ 7 ರಂದು ಪಾಕಿಸ್ತಾನದ ವಿರುದ್ಧ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ದಿನದಿಂದ, 2025ರ ನವೆಂಬರ್ 2 ರಂದು ಟ್ರೋಫಿ ಎತ್ತಿ ಹಿಡಿಯುವವರೆಗೆ, ಅವರು ಕಳೆದಿದ್ದು ಬರೋಬ್ಬರಿ 6,084 ದಿನಗಳು! ಈ ಸುದೀರ್ಘ ಪಯಣದಲ್ಲಿ ಅನುಭವಿಸಿದ ನೋವು, ಸೋಲು ಮತ್ತು ಅವಮಾನಗಳಿಗೆ ಈ ಗೆಲುವು ಉತ್ತರವಾಗಿದೆ.
ಬಿಸಿಸಿಐ ಹಂಚಿಕೊಂಡ ವೀಡಿಯೊದಲ್ಲಿ ಮಾತನಾಡಿದ ಅವರು, “ಇದು ನನಗೆ ಅತ್ಯಂತ ಭಾವನಾತ್ಮಕ ಕ್ಷಣ. ನಾನು ಟಿವಿ ನೋಡುತ್ತಾ ಕ್ರಿಕೆಟ್ ಆಡಲು ಆರಂಭಿಸಿದಾಗಿನಿಂದಲೂ ವಿಶ್ವಕಪ್ ಗೆಲ್ಲುವುದು ನನ್ನ ಬಾಲ್ಯದ ಕನಸಾಗಿತ್ತು. ಇಷ್ಟು ವರ್ಷಗಳ ಕನಸು ಈಗ ನನಸಾಗಿದೆ. ನಾನು ಈಗ ನಿರಾಳವಾಗಿದ್ದೇನೆ,” ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.


























