ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಬೆಂಗಳೂರಿನಲ್ಲಿ ಪಂದ್ಯ ಖಚಿತ

0
29

ಬೆಂಗಳೂರು: ಆರ್‌ಸಿಬಿ ಅಭಿಮಾನಿಗಳಿಗೆ ಬಹುದಿನಗಳ ಬಳಿಕ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರಕಾರ ಗ್ರೀನ್‌ ಸಿಗ್ನಲ್‌ ನೀಡಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ​​(ಕೆಎಸ್‌ಸಿಎ) ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರು, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದು ಬೆಂಗಳುರಿನಲ್ಲಿ ದೇಶೀಯ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಇದರೊಂದಿಗೆ, ಮುಂಬರುವ ಐಪಿಎಲ್ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯುವುದು ಖಚಿತವಾಗಿದೆ.

ಕಳೆದ ವರ್ಷ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೊಚ್ಚಲ ಐಪಿಎಲ್‌ ಟ್ರೋಫಿ ಗೆದ್ದಿರುವ ಹಿನ್ನೆಲೆ ಜೂನ್ 4 ರಂದು ಆಯೋಜಿಸಲಾಗಿದ್ದ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತದಲ್ಲಿ 11 ಜನ ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದರು. ಈ ಅಹಿತಕರ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಆದೇಶಿಸಿತ್ತು.

ಇದನ್ನೂ ಓದಿ: IND-SA 3rd T20: ಸರಣಿ ಮುನ್ನಡೆ ಯಾರಿಗೆ?

ತನಿಖೆ ಸಂದರ್ಭದಲ್ಲಿ ಚಿನ್ನಸ್ವಾಮಿ ಸ್ಟೇಡಿಯಂನ ಭದ್ರತೆ ಮತ್ತು ಸುರಕ್ಷತಾ ವ್ಯವಸ್ಥೆಗಳಲ್ಲಿ ಲೋಪಗಳು ಕಂಡುಬಂದಿದ್ದವು. ನ್ಯಾಯಮೂರ್ತಿ ಜಾನ್ ಮೈಕೆಲ್ ಡಿ’ಕುನ್ಹಾ ನೇತೃತ್ವದ ಆಯೋಗವು ಕ್ರೀಡಾಂಗಣವನ್ನು ‘ದೊಡ್ಡ ಮಟ್ಟದ ಕಾರ್ಯಕ್ರಮಗಳಿಗೆ ಅನರ್ಹ’ ಎಂದು ಪರಿಗಣಿಸಿತ್ತು. ಅಲ್ಲದೇ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸಲು ಹಲವು ಪ್ರಮುಖ ಸಲಹೆಗಳನ್ನು ಶಿಫಾರಸ್ಸು ಮಾಡಿತ್ತು.

ಬಿಸಿಸಿಐ ಕೂಡ ದುರಂತದ ಬಳಿಕ ಬೆಂಗಳೂರಿನಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದನ್ನು ನಿಲ್ಲಿಸಿತ್ತು. ಆರ್‌ಸಿಬಿ ಮೂಲಗಳ ಪ್ರಕಾರ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಪಂದ್ಯವಾಡಲು ಅನುಮತಿ ದೊರೆತಿರುವುದರಿಂದ, ಮಾರ್ಚ್‌ನಲ್ಲಿ ಪ್ರಾರಂಭವಾಗಲಿರುವ ಇಂಡಿಯನ್‌ ಪ್ರಿಮೀಯರ್‌ ಲೀಗ್‌ ಪಂದ್ಯಗಳು ಬೆಂಗಳೂರಿನಲ್ಲೇ ನಡೆಯಲಿವೆ.

Previous articleIND-SA 3rd T20: ಸರಣಿ ಮುನ್ನಡೆ ಯಾರಿಗೆ?
Next articleBREAKING: ಬಾಂಡಿ ಬೀಚ್‌ನಲ್ಲಿ ಸಾಮೂಹಿಕ ಗುಂಡಿನ ದಾಳಿ: 10 ಮಂದಿ ದಾರುಣ ಸಾವು