2022ರಲ್ಲಿ ಅಂತರಾಷ್ಟ್ರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರಾಸ್ ಟೇಲರ್ ತಮ್ಮ 41ನೇ ವಯಸ್ಸಿನಲ್ಲಿ ನಿವೃತ್ತಿಯನ್ನು ಹಿಂಪಡೆದಿದ್ದಾರೆ. ಈ ಕುರಿತಾಗಿ ಸಾಮಾಜಿಕ ಜಾಲತಾಣದ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಇದು ನಿಜವಾದ ಸುದ್ದಿ ಎಂದು ಖಚಿತಪಡಿಸಿದ್ದಾರೆ.
ಮುಂದಿನ ತಿಂಗಳಿಂದ ಓಮನ್‌ನಲ್ಲಿ ಆರಂಭವಾಗಲಿರುವ 2026ರ ಟಿ-20 ಅರ್ಹತಾ ಟೂರ್ನಿಯಲ್ಲಿ ಸಮೋವಾ ದೇಶದ ಪರವಾಗಿ ರಾಸ್ ಟೇಲರ್ ಮತ್ತೆ ಬ್ಯಾಟ್ ಬೀಸಲಿದ್ದಾರೆ. ನ್ಯೂಜಿಲೆಂಡ್ ಪರವಾಗಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 100ಕ್ಕೂ ಅಧಿಕ ಪಂದ್ಯ ಆಡಿದ ಏಕೈಕ ಕೀವಿಸ್ ಆಟಗಾರ ರಾಸ್ ಆಗಿದ್ದಾರೆ.
ನಾಲ್ಕು ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ನಿವೃತ್ತಿ ಘೋಷಿಸಿದ್ದ ಅವರು 2022ರಲ್ಲಿ ಬಾಂಗ್ಲಾದೇಶ ವಿರುದ್ಧ ಕೊನೆಯ ಟೆಸ್ಟ್ ಪಂದ್ಯ ಆಡಿದ್ದರು. ಏಪ್ರಿಲ್ 2022ರಲ್ಲಿ ತಮ್ಮ ಕೊನೆಯ ಟಿ-20 ಪಂದ್ಯ ಆಡಿದ್ದರು. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರಾಸ್ ಟೇಲರ್ ಒಟ್ಟಾರೆ 5 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. 2021ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಶಿಪ್‌ನಲ್ಲಿ ಕಪ್ ಸಹ ಎತ್ತಿದ್ದರು.
ರಾಸ್ ಟೇಲರ್ ಪೋಸ್ಟ್: “ಇದು ಅಧಿಕೃತ – ನಾನು ನೀಲಿ ಜೆರ್ಸಿ ಧರಿಸಿ ಕ್ರಿಕೆಟ್‌ನಲ್ಲಿ ಸಮೋವಾವನ್ನು ಪ್ರತಿನಿಧಿಸುತ್ತೇನೆ ಎಂದು ಘೋಷಿಸಲು ಹೆಮ್ಮೆಪಡುತ್ತೇನೆ. ಇದು ನಾನು ಪ್ರೀತಿಸುವ ಆಟಕ್ಕೆ ಮರಳುವುದಕ್ಕಿಂತ ಹೆಚ್ಚಿನದಾಗಿದೆ. ನನ್ನ ಪರಂಪರೆ, ಸಂಸ್ಕೃತಿ, ಹಳ್ಳಿಗಳು ಮತ್ತು ಕುಟುಂಬವನ್ನು ಪ್ರತಿನಿಧಿಸುವ ದೊಡ್ಡ ಗೌರವ ಇದು. ಆಟಕ್ಕೆ ಮರಳಲು, ತಂಡವನ್ನು ಸೇರಲು ಮತ್ತು ಮೈದಾನದ ಒಳಗೆ ಮತ್ತು ಹೊರಗೆ ನನ್ನ ಅನುಭವವನ್ನು ಹಂಚಿಕೊಳ್ಳಲು ಸಿಗುವ ಅವಕಾಶಕ್ಕಾಗಿ ನಾನು ಉತ್ಸುಕನಾಗಿದ್ದೇನೆ” ಎಂದು ಹೇಳಿದ್ದಾರೆ.