ಕ್ರಿಕೆಟ್ ಅಂಗಳದ ವಿಶಿಷ್ಟ ಅಂಪೈರ್ ಡಿಕ್ಕಿ ಬರ್ಡ್ ಇನ್ನಿಲ್ಲ: ಗಾವಸ್ಕರ್ ಕೂದಲು ಕತ್ತರಿಸಿದ್ದ ʼಡಿಕ್ಕಿʼ

0
16

ಕ್ರಿಕೆಟ್ ಜಗತ್ತು ತನ್ನ ಅತ್ಯಂತ ಪ್ರೀತಿಪಾತ್ರ ಮತ್ತು ವಿಶಿಷ್ಟ ಅಂಪೈರ್‌ಗಳಲ್ಲಿ ಒಬ್ಬರಾದ ಹ್ಯಾರಲ್ಡ್ ‘ಡಿಕ್ಕಿ’ ಬರ್ಡ್ ಅವರನ್ನು ಕಳೆದುಕೊಂಡಿದೆ. ತಮ್ಮ 92ನೇ ವಯಸ್ಸಿನಲ್ಲಿ, ಮಂಗಳವಾರ (ಸೆಪ್ಟೆಂಬರ್ 23) ಬರ್ಡ್ ನಿಧನರಾದರು. ಕ್ರೀಡಾಂಗಣದಲ್ಲಿ ಅವರ ವಿಭಿನ್ನ ಶೈಲಿ ಮತ್ತು ಹಾಸ್ಯಭರಿತ ವ್ಯಕ್ತಿತ್ವವು ಅವರನ್ನು ಕ್ರಿಕೆಟ್ ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುವಂತೆ ಮಾಡಿತ್ತು.

ಯಾರ್ಕ್‌ಶೈರ್ ಕೌಂಟಿ ಕ್ರಿಕೆಟ್ ಕ್ಲಬ್ ಅವರ ನಿಧನಕ್ಕೆ ಸಂತಾಪ ಸೂಚಿಸಿ, “ಅವರ ನಿಧನವು ಕ್ರಿಕೆಟ್‌ಗೆ ತುಂಬಲಾರದ ನಷ್ಟ” ಎಂದು ಹೇಳಿದೆ. ಡಿಕ್ಕಿ ಬರ್ಡ್ 1973 ರಿಂದ 1996 ರವರೆಗೆ 66 ಟೆಸ್ಟ್ ಪಂದ್ಯಗಳು ಮತ್ತು 69 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಸೇವೆ ಸಲ್ಲಿಸಿದ್ದಾರೆ. ಅವರ ಪ್ರತಿಯೊಂದು ನಿರ್ಧಾರವೂ ನಿಖರ ಮತ್ತು ನಿಸ್ಪಕ್ಷಪಾತವಾಗಿರುತ್ತಿತ್ತು.

ಕೇವಲ ಅಂಪೈರಿಂಗ್ ಮಾತ್ರವಲ್ಲದೆ, ಕ್ರೀಡಾಸ್ಫೂರ್ತಿ ಮತ್ತು ಮಾನವೀಯತೆಯಿಂದಲೂ ಅವರು ಗುರುತಿಸಿಕೊಂಡಿದ್ದರು. ಆಟಗಾರರೊಂದಿಗೆ ಬೆರೆಯುವ ಅವರ ಸರಳ ಸ್ವಭಾವ, ಕೆಲವೊಮ್ಮೆ ತಮಾಷೆಯ ವರ್ತನೆಗಳು ಪ್ರೇಕ್ಷಕರ ಮನ ಗೆದ್ದಿದ್ದವು. ಮೈದಾನದಲ್ಲಿ ನಗುತ್ತಾ, ಕೈಯಲ್ಲಿ ತಮ್ಮದೇ ಆದ ವಿಶಿಷ್ಟ ಬಾವುಟ ಹಿಡಿದು ನಡೆದಾಡುತ್ತಿದ್ದ ಅವರ ದೃಶ್ಯ ಇಂದಿಗೂ ಅನೇಕ ಕ್ರಿಕೆಟ್ ಪ್ರೇಮಿಗಳ ಕಣ್ಮುಂದೆ ಇದೆ.

ಗಾವಸ್ಕರ್ ಅವರ ಕೂದಲು ಕತ್ತರಿಸಿದ್ದ ಮರೆಯಲಾಗದ ಕ್ಷಣ: ಡಿಕ್ಕಿ ಬರ್ಡ್ ಅವರ ಅಂಪೈರಿಂಗ್ ವೃತ್ತಿಜೀವನದಲ್ಲಿ ಹಲವು ಮರೆಯಲಾಗದ ಘಟನೆಗಳಿವೆ. ಅವುಗಳಲ್ಲಿ ಒಂದು, 1974ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ವೇಳೆ ನಡೆದ ಸನ್ನಿವೇಶ. ಆಗ ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಸುನಿಲ್ ಗಾವಸ್ಕರ್ ಅವರಿಗೆ ತಮ್ಮ ತಲೆಗೂದಲು ಕಣ್ಣಿಗೆ ಅಡ್ಡ ಬರುತ್ತಿತ್ತು. ಇದನ್ನು ಗಮನಿಸಿದ ಡಿಕ್ಕಿ ಬರ್ಡ್, ತಾವು ಬಾಲ್‌ನ ಥ್ರೆಡ್ ಕತ್ತರಿಸಲು ಬಳಸುತ್ತಿದ್ದ ಕತ್ತರಿಯಿಂದ ಕ್ರೀಡಾಂಗಣದಲ್ಲೇ ಗಾವಸ್ಕರ್ ಅವರ ಕೂದಲನ್ನು ಸರಿಪಡಿಸಿದ್ದರು. ಈ ಘಟನೆ ಅವರ ಕ್ರೀಡಾಸ್ಫೂರ್ತಿ ಮತ್ತು ಆಟಗಾರರ ಮೇಲಿದ್ದ ಕಾಳಜಿಗೆ ಉತ್ತಮ ನಿದರ್ಶನವಾಗಿದೆ

ಡಿಕ್ಕಿ ಬರ್ಡ್, ಅಂಪೈರ್ ಆಗುವ ಮೊದಲು ಯಾರ್ಕ್‌ಶೈರ್ ಕೌಂಟಿ ಪರ 1956ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 93 ಪಂದ್ಯಗಳಿಂದ 3,314 ರನ್ ಗಳಿಸಿ, 1964 ರಲ್ಲಿ ನಿವೃತ್ತರಾದರು. ಅವರು 1996ರಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಲಾರ್ಡ್ಸ್ ಟೆಸ್ಟ್‌ನಲ್ಲಿ ಕೊನೆಯ ಬಾರಿಗೆ ಅಂಪೈರ್ ಆಗಿ ಸೇವೆ ಸಲ್ಲಿಸಿದರು.

ಆ ಪಂದ್ಯವು ಭಾರತದ ಮಾಜಿ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರ ಟೆಸ್ಟ್ ಕ್ರಿಕೆಟ್ ಪದಾರ್ಪಣೆಗೆ ಸಾಕ್ಷಿಯಾಗಿತ್ತು ಎಂಬುದು ವಿಶೇಷ. ಬ್ರಹ್ಮಚಾರಿಯಾಗಿದ್ದ ಡಿಕ್ಕಿ ಬರ್ಡ್, ರಾಣಿ ಎಲಿಜಬೆತ್ ಮತ್ತು ಖ್ಯಾತ ಲೇಖಕ ಸ್ಟೀಫನ್ ಕಿಂಗ್ ಸೇರಿದಂತೆ ಅನೇಕ ಗಣ್ಯರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಕ್ರಿಕೆಟ್ ಜಗತ್ತು ಅವರನ್ನು ಎಂದಿಗೂ ಮರೆಯಲಾರದು.

Previous articleಚನ್ನಗಿರಿ: ವಿವಾದಾತ್ಮಕ ಪೋಸ್ಟರ್‌ಗೆ ಬಣ್ಣ – ಬಿಗುವಿನ ವಾತಾವರಣ
Next articleಕಲ್ಯಾಣ ಕರ್ನಾಟಕದಲ್ಲಿ ಮುಂದುವರಿದ ಮಳೆ: ಸೇತುವೆಗಳು ಜಲಾವೃತ

LEAVE A REPLY

Please enter your comment!
Please enter your name here